ಬೆಂಗಳೂರು: ರಾಜ್ಯದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯುವ ಜಿಲ್ಲೆಯ ರೈತರ ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ “ತುರ್ತು ವಾಹನ ಸೇವೆ” (ಅಂಬ್ಯುಲೆನ್ಸ್) ಆರಂಭಿಸಿದ್ದು, ಪಶುಚಿಕಿತ್ಸಾಲಯ ಲಭ್ಯವಿಲ್ಲದ ಗ್ರಾಮಗಳ ರೈತರು ಜಾನುವಾರುಗಳ ತುರ್ತು ಚಿಕಿತ್ಸೆ ಅವಶ್ಯವಿದ್ದಲ್ಲಿ ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆಮಾಡಿ ಈ ಸೇವೆ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ, ರೈತರ ಮನೆ ಬಾಗಿಲಿಗೆ ತುರ್ತು ಪಶುವೈದ್ಯಕೀಯ ಸೇವೆಗಳನ್ನು ಒದಗಿಸಲು 290 ಸುಸಜ್ಜಿತ ಸಂಚಾರಿ ಪಶುವೈದ್ಯಕೀಯ ವಾಹನಗಳನ್ನು ಒದಗಿಸಲಾಗಿದೆ.
ಸುಸಜ್ಜಿತ ಅಂಬ್ಯುಲೆನ್ಸ್ ವಾಹನ ಆಧುನಿಕ ಪಶು ವೈದ್ಯಕೀಯ ಸೇವೆಗಳಾದ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಸಲಾಗಿದೆ. ಪ್ರಸೂತಿ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್, ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್, ವಾಶ್ ಬೇಸಿನ್, ಆಮ್ಲಜನಕ ಸಪೋರ್ಟ್ ಸಿಸ್ಟಮ್ ಒಳಗೊಂಡಿದ್ದು, ಪ್ರತಿ ಪಾಲಿಕ್ಲಿನಿಕ್‌ನ ಒಬ್ಬರು ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು ಸಹಾಯಕರನ್ನು ನೇಮಕ ಮಾಡಲಾಗಿದೆ. ಪಶು ಪಾಲಕರು ಸಹಾಯವಾಣಿ ಸಂಖ್ಯೆ-1962ಕ್ಕೆ ಕರೆ ಮಾಡಿದರೆ ರೋಗಗ್ರಸ್ತ ಜಾನುವಾರು ಸ್ಥಳಕ್ಕೆ ವಾಹನ ತೆರಳಿ ವೈದ್ಯಕೀಯ ಸೇವೆ ನೀಡಲಿದೆ. ವಿಷಪ್ರಾಶನ, ಪ್ರಸವಕ್ಕೆ ಸಂಬಂಧಿಸಿದ ತೊಂದರೆಗಳು, ಹೊಟ್ಟೆಯುಬ್ಬರ, ಉಸಿರುಗಟ್ಟುವುದು, ಅಪಘಾತ, ಮೂಳೆಮುರಿತ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಜಾನುವಾರುಗಳನ್ನು ವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆ ಪಡೆಯುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ. ಈ ಮೂಲಕ ಜಾನುವಾರುಗಳ ಪ್ರಾಣ ಹಾನಿ ಆಗುವುದನ್ನು ತಡೆಗಟ್ಟಿ ರೈತರಿಗೆ ಎದುರಾಗುವ ಆರ್ಥಿಕ ಸಂಕಷ್ಟ ತಪ್ಪಿಸಲು ಅನುಕೂಲ ಆಗುತ್ತಿದೆ.