ದಾವಣಗೆರೆ : ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಹಾಗೂ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಂದು ಚನ್ನಗಿರಿ ಪೊಲೀಸ್ ಠಾಣೆಗೆ ಗ್ರಹ ಇಲಾಖೆಯ ಸಚಿವ ಡಾ. ಜಿ ಪರಮೇಶ್ವರ್ ಭೇಟಿ ನೀಡಿ, ಠಾಣೆಯ ಮೇಲೆ ಕಲ್ಲು ತೂರಾಟದ ವೇಳೆ ಯಾರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇಂದು ಚನ್ನಗಿರಿ ಪೊಲೀಸ್ ಠಾಣೆಗೆ ಸಚಿವ ಜಿ ಪರಮೇಶ್ವರ್ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದ ಘಟನೆ ನಡೆದಿತ್ತು. ಲಾಕಪ್ ಡೆತ್ ಆರೋಪ ಮಾಡಿ ದುಷ್ಕರ್ಮಿಗಳು ಕಲ್ಲು ತೂರಿ ದಾಂಧಲೆ ನಡೆಸಿದ್ದರು. ನಂತರ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ ಗೆ ಹಸ್ತಾಂತರಿಸಿತ್ತು ಎಂದು ತಿಳಿಸಿದರು.
ಪ್ರಕರಣದಲ್ಲಿ ಇದುವರೆಗೆ 30 ಆರೋಪಿಗಳನ್ನು ಬಂಧಿಸಲಾಗಿದೆ. ಒಂದು ಕಡೆ ಠಾಣೆಗೆ ಶವ ತಂದಿಟ್ಟು ಪ್ರತಿಭಟನೆ ಮಾಡಿ ಕಲ್ಲು ತೂರಿದರೆ ಠಾಣೆ ಮುಂದಿದ್ದ ವ್ಯಾನ್ ಜಖಂಗೊಳಿಸಿದ್ದು ಒಂದು ಭಾಗವಾದರೆ, ಮಟ್ಕಾ ಆಡಿಸುತ್ತಿದ್ದಾನೆಂದು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದರು ಪೊಲೀಸರ ವಶದಲ್ಲಿದ್ದ ವೇಳೆ ಆರೋಪಿ ಮೃತಪಟ್ಟಿದ್ದು ಇನ್ನೊಂದು ಭಾಗವಾಗಿದೆ.ಹಾಗಾಗಿ ಪ್ರಕರಣದ ತನಿಖೆಯನ್ನು ಸಿಐಡಿ ಗೆ ವಹಿಸಲಾಗಿದೆ.
ಸಾವಿಗೆ ನಿಖರವಾದಂತಹ ಕಾರಣ ಗೊತ್ತಾಗಬೇಕಿದೆ.ಯಾರೇ ತಪ್ಪು ಮಾಡಿದ್ದರು ಬಿಡುವ ಪ್ರಶ್ನೆಯೇ ಇಲ್ಲ. ಠಾಣೆಯ ಮೇಲೆ ಕಲ್ಲು ತೂರಿದವರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮರವನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ಠಾಣೆಯ ಮೇಲೆ ದಾಳಿಯ ವೇಳೆ ಯಾರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ. ಆರೋಪ ಮಾಡುವವರು ಸಾಕ್ಷಿ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇಲ್ಲದಿದ್ದರೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದು ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.
ಈ ವೇಳೆ ಪೂರ್ವ ವಲಯ ಐಜಿಪಿ, ಹಾಗೂ ಎಸ್ಪಿ ಉಮಾ ಪ್ರಶಾಂತ್ ಅವರಿಂದ ಗೃಹ ಸಚಿವ ಜಿ. ಪರಮೇಶ್ವರ್ ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ.ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್, ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ ಶಿವಗಂಗಾ ಮತಿತರರು ಗೃಹ ಸಚಿವರಿಗೆ ಸಾಥ್ ನೀಡಿದರು.