ದಾವಣಗೆರೆ : ರಾಜ್ಯದಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ. ಕೋಮು ಭಾವನೆ ಕೆರಳಿಸುವ ಘಟನೆ ನಡೆದಿಲ್ಲ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಂಭೀರ ಪ್ರಕರಣ ನಡೆದಿಲ್ಲ. ಈ ಬಗ್ಗೆ ನಮ್ಮ ಬಳಿ ಅಂಕಿ ಸಂಖ್ಯೆಗಳಿವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ತಿಳಿಸಿದರು.
ಇಂದು ಅವರು ಚೆನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಘಟನೆ ಸಂಬಂಧಪಟ್ಟ 108 ಆರೋಪಿಗಳನ್ನು ಗುರುತಿಸಲಾಗಿದೆ ಎಂದು ದಾವಣಗೆರೆಯಲ್ಲಿ ಎಡಿಜಿಪಿ ಆರ್ ಹಿತೇಂದ್ರ ಹೇಳಿಕೆ ನೀಡಿದರು.
ಕಲ್ಲುತೂರಾಟ ಮಾಡಿದ 30 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುತ್ತದೆ. ಈಗಾಗಲೇ ಈ ಘಟನೆ ಸಂಬಂಧಪಟ್ಟ ಎಫ್ಐಆರ್ ಸಹ ದಾಖಲಾಗಿದೆ. ಪೊಲೀಸರ ಮೇಲೆ ಕೂಡ ದಾಳಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವಿನ ಬಗ್ಗೆ ನಡೆಸಲಾಗುತ್ತಿದೆ. ವೈದ್ಯಕೀಯ ವರದಿ ಬಗ್ಗೆ ಸಿಐಡಿ ಅಧಿಕಾರಿಗಳನ್ನೇ ಕೇಳಬೇಕು. ಕೆಲವು ಅಧಿಕಾರಿಗಳನ್ನು ಅಮಾನತು ಮಾಡುವುದು ಸಾಮಾನ್ಯ. ಅಮಾನತು ಅಂದರೆ ಅದೇನು ದೊಡ್ಡ ಶಿಕ್ಷೆಯಲ್ಲ. ತನಿಖೆಯಲ್ಲಿ ತಪ್ಪಿಲ್ಲ ಅಂತ ಗೊತ್ತಾದರೆ ಮತ್ತೆ ಸೇವೆಗೆ ಬರಬಹುದು ಎಂದು ಅವರು ಹೇಳಿದರು.