ಮೈಸೂರು : ರಾಜ್ಯದಲ್ಲಿ ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಉತ್ಸಾಹದಿಂದ ಶಾಲೆಯತ್ತ ಮುಖ ಮಾಡಿದ್ದಾರೆ.ಇದೆ ವೇಳೆ ಈ ಬಾರಿ ಶಾಲಾ ಪಠ್ಯ ಪುಸ್ತಕದಲ್ಲಿ ಯಾವುದೇ ರೀತಿಯಾದ ಪರಿಷ್ಕರಣೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಣೆ ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಶಾಲಾ ಪಠ್ಯಪುಸ್ತಕದ ಪರಿಷ್ಕರಣೆ ಇಲ್ಲ. ಕೆಲವು ವ್ಯಾಕರಣ ಹಾಗೂ ಪದಗಳ ಬದಲಾವಣೆ ಮಾಡಲಾಗಿದೆ. ತಪ್ಪಿದ್ದನ್ನು ಸರಿ ಮಾಡಲಾಗಿದೆ. ಒಂದು ಪೇಜ್ ಬದಲಾಗಿದೆ ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದರು.
ಇನ್ನು ನಿನ್ನೆ ಶಿಕ್ಷಣ ಸಚಿವ ಇನ್ನೂ ಸಿನಿಮಾ ಭ್ರಮೆಯಲ್ಲಿದ್ದಾರೆ, ಮೊದಲು ಹೇರ್ ಕಟಿಂಗ್ ಮಾಡಿಸಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕೇಶದ ಕುರಿತು ಹೇಳಿಕೆ ನೀಡಿದರು. ಇದೀಗ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮದ್ದು ಬಂಗಾರಪ್ಪ ಬಿ ವೈ ವಿಜಯೇಂದ್ರ ಅವರು ಫ್ರೀ ಇದ್ದರೆ ಬಂದು ನನ್ನ ಕಟಿಂಗ್ ಮಾಡಲಿ. ಸದ್ಯಕ್ಕೆ ನಾನು ಫ್ರೀ ಇಲ್ಲ ಎಂದು ತಿರುಗೇಟು ನೀಡಿದರು.
ಶಾಲಾಮಕ್ಕಳ ಭವಿಷ್ಯ ಮತ್ತು ಅವರ ಹಿತಾಸಕ್ತಿಯ ದೃಷ್ಟಿಯಿಂದ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ ಮಧು ಬಂಗಾರಪ್ಪ, ಬಿಜೆಪಿ ಸರ್ಕಾರಕ್ಕೆ ಶಿಕ್ಷಕರ ನೇಮಕಾತಿ ಮಾಡುವುದು ಸಹ ಸಾಧ್ಯವಾಗಿರಲಿಲ್ಲ, ಅದನ್ನು ತಮ್ಮ ಸರ್ಕಾರ ಮಾಡಬೇಕಾಯಿತು ಎಂದರು.ಹಿಂದಿನ ಬಿಜೆಪಿ ಸರ್ಕಾರ ಪಠ್ಯಪುಸ್ತಕಗಳನ್ನು ಹೊಲಸೆಬ್ಬಿಸಿದ್ದ ಕಾರಣ ಅವುಗಳ ಪಾವಿತ್ರ್ಯತೆ ಹಾಳಾಗಿತ್ತು, ಎಲ್ಲವನ್ನು ಸ್ವಚ್ಛಗೊಳಿಸುವ ಕೆಲಸ ತಮ್ಮ ಇಲಾಖೆ ಮಾಡುತ್ತಿದೆ ಎಂದು ಸಚಿವ ಹೇಳಿದರು.