ಬೆಂಗಳೂರು : 2024ರ ಎಸ್. ಎಸ್.ಎಲ್.ಸಿ. ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಿನಾಂಕ:29.05.2024 ರಿಂದ 13.06.2024ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ನಡೆಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖದ ಈ ಕಛೇರಿ ಜ್ಞಾಪನಾದಲ್ಲಿ 2024ರ ಮಾರ್ಚ್-ಏಪ್ರಿಲ್ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ಹಾಗೂ ಸಿ ಮತ್ತು ಸಿ+ ಶ್ರೇಣಿ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ದಿನಾಂಕ: 14.06.2024 ರಿಂದ ಪ್ರಾರಂಭವಾಗುವ 20240 ໖. ಲ್.ಎಲ್.ಸಿ.ಪರೀಕ್ಷೆ-2 ರಲ್ಲಿ ಉತ್ತೀರ್ಣರಾಗಲು ತಯಾರಿಗೊಳಿಸಲು ಆಯಾ ಶಾಲೆಯ ವಿಷಯ ಬೋಧನಾ ಶಿಕ್ಷಕರಿಂದ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ದಿನಾಂಕ: 29.05.2024 ರಿಂದ 13.06.2024ರವರೆಗೆ ನಡೆಸಲು ಸೂಚನೆ ನೀಡಲಾಗಿದೆ.
ಸದರಿ ತರಗತಿಗಳನ್ನು ನಡೆಸಲು ಈ ಕೆಳಗಿನ ಸೂಚನೆಗಳನ್ನು ಪಾಲಿಸಲು ತಿಳಿಸಿದೆ.
1. ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ 2024ರ ಎಸ್.ಎಸ್.ಎಲ್.ಸಿ.ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಎಸ್. ಎಸ್.ಎಲ್.ಸಿ. ಪರೀಕ್ಷೆ-2 ತೆಗೆದುಕೊಳ್ಳಲು ಕಡ್ಡಾಯವಾಗಿ ನೊಂದಾಯಿಸಲು ಕ್ರಮವಹಿಸುವುದು.
2. 2024ರ ಎಸ್.ಎಸ್.ಎಲ್.ಸಿ.ಪರೀಕ್ಷೆ-1 ರಲ್ಲಿ c, c+. ಶ್ರೇಣಿ ಪಡೆದ ವಿದ್ಯಾರ್ಥಿಗಳು ಅವರ ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ-2ನ್ನು ಬರೆಯಲು ಉತ್ತೇಜಿಸಿ ನೊಂದಾಯಿಸಲು ಕ್ರಮವಹಿಸುವುದು ಹಾಗೂ ವಿಶೇಷ ಪರಿಹಾರ ಬೋಧನೆ ತರಗತಿಗೆ ಹಾಜರಾಗಲು ಅವರಿಗೂ ಅವಕಾಶ ಕಲ್ಪಿಸುವುದು.
3. ಸರ್ಕಾರಿ/ಅನುದಾನಿತ ಶಾಲೆಯಲ್ಲಿ ಆಯಾ ಶಾಲೆಗಳಲ್ಲಿ 2024ರ ಎಸ್.ಎಸ್.ಎಲ್.ಸಿ.ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಸದರಿ ಪರೀಕ್ಷೆಯಲ್ಲಿ c. c+, ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಆಯಾ ಶಾಲೆಯಲ್ಲಿಯೇ ಅದೇ ಶಾಲೆಯ ವಿಷಯ ಬೋಧಕ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ನಡೆಸುವುದು.
4. ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಈ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಿ, ಸದರಿ ತರಗತಿಗಳು ಸಮರ್ಪಕವಾಗಿ ನಡೆಸಲು ಕ್ರಮವಹಿಸುವುದು.
5. ಹಾಜರಾಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಊಟದ ವ್ಯವಸ್ಥೆಯನ್ನು ಆಯಾ ಶಾಲಾ ಮುಖ್ಯ ಶಿಕ್ಷಕರು ಮಾಡುವುದು. ಈ ಕುರಿತು ನಿರ್ದೇಶಕರು, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್, ಇವರು ನೀಡುವ ನಿರ್ದೇಶನಗಳಂತೆ ಕ್ರಮವಹಿಸುವುದು.
6. ವಿಶೇಷ ಪರಿಹಾರ ಬೋಧನಾ ತರಗತಿಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ರಲ್ಲಿ ಯಶಸ್ವಿಯಾಗಲು ಸಾಧ್ಯವಾಗುವಂತೆ ಆಯಾ ಜಿಲ್ಲೆಯ ವಿಷಯ ಶಿಕ್ಷಕರು ನಿರ್ಮಿಸಿರುವ “ಪಾಸಿಂಗ್ ಪ್ಯಾಕೇಜ್” ಬಳಸಿಕೊಂಡು ಸದರಿ ವಿದ್ಯಾರ್ಥಿಗಳು ಉತ್ತೀರ್ಣರಾಗಲು ತಯಾರಿಗೊಳಿಸುವಲ್ಲಿ ಆಧ್ಯತೆ ನೀಡುವುದು ಹಾಗೂ ಕಲ್ಬುರ್ಗಿ ವಿಭಾಗದ ವಿಷಯ ಶಿಕ್ಷಕರು ನಿರ್ಮಿಸಿರುವ “ಕಲಿಕಾಸರೆ” ಪುಸ್ತಕಗಳನ್ನೂ ಸಹ ಬಳಸಿಕೊಳ್ಳಬಹುದು. ಪ್ರತಿ ದಿನ ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ ಅವರ ಬರವಣಿಗೆ ರೂಢಿ ಮಾಡಿಸುವುದು. ವಿದ್ಯಾರ್ಥಿಗಳ ಬರವಣಿಗೆ ಕಾರ್ಯವನ್ನು ಶಿಕ್ಷಕರು ಆ ದಿನವೇ ಪರಿಶೀಲಿಸಿ ಅವರಿಗೆ ಹಿಮ್ಮಾಹಿತಿ ಮತ್ತು ಪರಿಹಾರ ನೀಡಿ ಅಂದವಾದ ಬರವಣಿಗೆ ರೂಢಿ ಮಾಡಿಸುವುದು.
7. ಆಯಾ ಶಾಲೆಯ ವಿಶೇಷ ತರಗತಿಗಳ ವೇಳಾ ಪಟ್ಟಿಯನ್ನು ಆಯಾ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಶಾಲಾ ಸಮಯಕ್ಕೆ ಅನುಗುಣವಾಗಿ ವೇಳಾಪಟ್ಟಿಯನ್ನು ತಯಾರಿಸುವುದು.
8. ಅನುತ್ತೀರ್ಣರಾದ ಮತ್ತು c, c+, ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಆಯಾ ಶಾಲಾ ಮುಖ್ಯ ಶಿಕ್ಷಕರು ಹಾಗೂ ವಿಷಯ ಶಿಕ್ಷಕರು ಧನಾತ್ಮಕವಾಗಿ ಪ್ರೇರೇಪಿಸಿ ಅವರು ವಿಶೇಷ ತರಗತಿಗಳಿಗೆ ಹಾಜರಾಗಲು ಹಾಗೂ ಪರೀಕ್ಷೆ-2 ರಲ್ಲಿ ಉತ್ತೀರ್ಣರಾಗಲು ಕ್ರಮವಹಿಸುವುದು.
9. ವಿಶೇಷ ಪರಿಹಾರ ಬೋಧನೆ ತರಗತಿಗಳ ಕುರಿತು ಬಗ್ಗೆ ನಮೂನೆ-1 ಮತ್ತು 2 ರಲ್ಲಿ ಆಯಾ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಕ್ರೂಡೀಕರಿಸಿ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಇಟ್ಟುಕೊಳ್ಳುವುದು. ಸದರಿ ಮಾಹಿತಿ ಕುರಿತು ಕೇಂದ್ರ ಕಛೇರಿಯಿಂದ ಕೋರಿದಾಗ ದೃಢೀಕರಿಸಿ ಒದಗಿಸುವುದು. ಹಾಗೂ ವಿದ್ಯಾರ್ಥಿಗಳ ದಾಖಲಾತಿ/ಹಾಜರಾತಿ ಮಾಹಿತಿಯನ್ನು ನಮೂನೆ-3 ರಲ್ಲಿ ದಿನನಿತ್ಯ ಜಿಲ್ಲಾ ಮಟ್ಟದ ಕ್ರೂಢೀಕೃತ ಮಾಹಿತಿಯನ್ನು ಉಪನಿರ್ದೇಶಕರು ಪ್ರತಿದಿನ ಮಧ್ಯಾಹ್ನ 12.00 ಗಂಟೆ ಒಳಗೆ ಕೇಂದ್ರ ಕಛೇರಿಗೆ ಇ-ಮೇಲ್est4cpibng@gmail.com ನಲ್ಲಿ ಅಳವಡಿಸಿರುವ google spreadsheet ನಲ್ಲಿ ಇಂಧೀಕರಿಸುವುದು. ಹಾಗೂ ಪ್ರತಿ ದಿನ ಮಧ್ಯಾಹ್ನ 12.00 ಗಂಟೆ ಒಳಗೆ ಇದರ ದೃಢೀಕರಿಸಿದ ಪ್ರತಿಯನ್ನು ಸದರಿ ಇ-ಮೇಲ್ ಗೆ ಮೇಲ್ ಮಾಡುವುದು.
10. ಸರ್ಕಾರಿ/ಅನುದಾನಿತ ಶಾಲೆಯ ವಿದ್ಯಾರ್ಥಿಗಳು 2023-24ರಲ್ಲಿ ಯಾವುದೇ ವಿದ್ಯಾರ್ಥಿ ನಿಲಯಗಳಲ್ಲಿ 10ನೇ ತರಗತಿ ಅಭ್ಯಾಸ ಮಾಡಿದ್ದು ಅನುತ್ತೀರ್ಣರಾಗಿದ್ದಲ್ಲಿ ಹಾಗೂ ಈ ವಿದ್ಯಾರ್ಥಿಗಳು ಪ್ರಸ್ತುತ ತಮ್ಮ ಸ್ವಂತ ಸ್ಥಳದಲ್ಲಿ ವಾಸವಾಗಿದ್ದಲ್ಲಿ ಸ್ವಂತ ಸ್ಥಳದ ಸಮೀಪದಲ್ಲಿರುವ ಶಾಲೆಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರು ಕ್ರಮವಹಿಸುವುದು.
11. ತಾಲ್ಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಅವರ ತಂಡದವರು ಸದರಿ ಕಾರ್ಯಕ್ರಮದ ಸಂಪೂರ್ಣ ಮೇಲುಸ್ತುವಾರಿ ನಿರ್ವಹಿಸುವುದು.
12. ಜಿಲ್ಲಾ ಹಂತದಲ್ಲಿ ಎಸ್. ಎಸ್.ಎಲ್.ಸಿ. ನೋಡಲ್ ಅಧಿಕಾರಿಗಳು ಡಯಟ್ ಉಪನ್ಯಾಸಕರು ಹಾಗೂ ವಿಷಯ ಪರಿವೀಕ್ಷಕರುಗಳನ್ನು ತಾಲ್ಲೂಕುವಾರು ನೋಡಲ್ ಅಧಿಕಾರಿಯಾಗಿ ನಿಯುಕ್ತಿಗೊಳಿಸುವುದು.
13. ಉಪನಿರ್ದೇಶಕರು ಹಾಗೂ ಡಯಟ್ ಪ್ರಾಂಶುಪಾಲರು ಜಿಲ್ಲಾ ಹಂತದಲ್ಲಿ ಇಡೀ ಕಾರ್ಯಕ್ರಮದ ಸಂಪೂರ್ಣ ಮೇಲುಸ್ತುವಾರಿ ಮಾಡುವುದು.
14. ಜಿಲ್ಲಾ ನೋಡಲ್ ಅಧಿಕಾರಿಗಳು ತಮಗೆ ನಿಯೋಜಿಸಲ್ಪಟ್ಟಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಹಾರ ಬೋಧನಾ ಚಟುವಟಿಕೆಗಳನ್ನು ಅವಲೋಕಿಸಿ ಸಮಗ್ರ ವರದಿ ನೀಡುವುದು.
ವಿಶೇಷ ಸೂಚನೆ:- ಅನುದಾನ ರಹಿತ ಶಾಲೆಗಳಲ್ಲಿ ಅನುತ್ತೀರ್ಣರಾಗಿರುವ ಹಾಗೂ c. c+. ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ, ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳನ್ನು ನೊಂದಾಯಿಸಿ ಆಯಾ ಅನುದಾನ ರಹಿತ ಶಾಲೆಗಳಲ್ಲಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲು ಆಡಳಿತ ಮಂಡಳಿಯೇ ಕ್ರಮವಹಿಸುವುದು.