ಬೆಂಗಳೂರು : ರಾಜ್ಯ ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳ ಪ್ರಚಾರ ಮಾಡಿ ಸರ್ಕಾರಿ ಶಾಲೆಗಳಲಿ ಮಕ್ಕಳ ದಾಖಲಾತಿ ಹೆಚ್ಚಿಸುವಂತೆ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಶಾಲೆಗಳಲ್ಲಿ 2024-25 ನೇ ಸಾಲಿನಲ್ಲಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಕುರಿತು ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರು ವಹಿಸಬೇಕಾದ ಕ್ರಮಗಳ ಕುರಿತು ಉಲ್ಲೇಖಿತ ಸುತ್ತೋಲೆ ಮೂಲಕ ವಿಸ್ತ್ರತವಾದ ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ.
ಮುಂದುವರೆದು, ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಆಂದೋಲನವನ್ನು ದಿನಾಂಕ: 31.05.2024 ರಿಂದ ಆರಂಭಿಸಿ, ಒಂದು ವಾರದವರೆಗೆ ನಿರ್ವಹಿಸಲು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಸಂಬಂಧಿಸಿದ ಹಾಜರಾತಿ ಅಧಿಕಾರಿ ಮತ್ತು ಸಿಬ್ಬಂದಿಗಳು ಅಗತ್ಯ ಕ್ರಮಗಳನ್ನು ವಹಿಸುವಂತೆ ಸಹ ಸದರಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅದರಂತೆ ಕಾರ್ಯಪ್ರವೃತ್ತರಾಗಲು ಸಂಬಂಧಿಸಿದ ಎಲ್ಲಾ ತಾಲ್ಲೂಕು, ಜಿಲ್ಲಾ ನೋಡಲ್ ಅಧಿಕಾರಿಗಳು, ಉಪನಿರ್ದೇಶಕರು(ಆಡಳಿತ) & (ಅಭಿವೃದ್ಧಿ), ಉಪಯೋಜನಾ ಸಮನ್ವಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶಾಲಾ ಮೇಲುಸ್ತುವಾರಿ ಅಧಿಕಾರಿಗಳು, ಹಾಜರಾತಿ ಅಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರಿಗೆ ಈ ಮೂಲಕ ಮತ್ತೊಮ್ಮೆ ತಿಳಿಸಲಾಗಿದೆ.
ಇದರೊಂದಿಗೆ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಳೆದ ಸಾಲುಗಳಲ್ಲಿ ಇದ್ದ ವಿದ್ಯಾರ್ಥಿಗಳ ದಾಖಲಾತಿಯನ್ನು ಗಣನೀಯವಾಗಿ ಹೆಚ್ಚಿಸಲು ಕೆಳಕಂಡ ಸಕಾಲಿಕ ಕ್ರಮಗಳನ್ನು ವಹಿಸುವಂತೆ ಸದರಿ ಅಧಿಕಾರಿಗಳಿಗೆ, ಶಾಲಾ ಮುಖ್ಯಸ್ಥರಿಗೆ ಹಾಗೂ ಸಿಬ್ಬಂದಿಗಳಿಗೆ ಈ ಮೂಲಕ ತಿಳಿಸಲಾಗಿದೆ.
1. ಶಾಲೆ ಪ್ರಾತಿನಿಧ್ಯ ಕುರಿತಂತೆ ವ್ಯಾಪಕ ಪ್ರಚಾರ ಕೈಗೊಳ್ಳುವುದು:- ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಇರುವುದನ್ನು ಹಾಗೂ ಸಂಪೂರ್ಣ ಶಾಲಾ ಕಟ್ಟಡ ಸ್ವಚ್ಚವಾಗಿರುವುದನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳತಕ್ಕದ್ದು. ಒಂದು ವೇಳೆ ಚಿಕ್ಕ-ಪುಟ್ಟ ದುರಸ್ತಿಗಳನ್ನು ಮತ್ತು ಕಾಮಗಾರಿಗಳನ್ನು ಕೈಗೊಳ್ಳುವ ಅಗತ್ಯವಿದ್ದಲ್ಲಿ ಅದನ್ನು ಲಭ್ಯವಿರುವ ಅನುದಾನವನ್ನು ವ್ಯಯಿಸಿ ಅಥವಾ ಜಿಲ್ಲಾಡಳಿತದ ಸಹಕಾರದೊಂದಿಗೆ ಅಥವಾ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ” ನಮ್ಮ ಶಾಲೆ ನಮ್ಮ ಜವಾಬ್ದಾರಿ ” ಅಡಿಯಲ್ಲಿ ದಿನಾಂಕ: 27.05.2024 ರೊಳಗೆ ಪೂರ್ಣಗೊಳಿಸಿಕೊಂಡು, ಸರ್ಕಾರಿ ಶಾಲೆಗಳನ್ನು ಸುಸಜ್ಜಿತವಾಗಿ ಮತ್ತು ಆಕರ್ಷಕವಾಗಿ ಇರಿಸಿಕೊಳ್ಳತಕ್ಕದ್ದು. ಈ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳತಕ್ಕದ್ದು.
2. 2024-25 ನೇ ಸಾಲಿನ ವಾರ್ಷಿಕ ಕಾರ್ಯಸೂಚಿ ಕುರಿತು:- ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮ ಅನುಷ್ಠಾನದ ಬಗ್ಗೆ, ವಾರ್ಷಿಕ ಕ್ರಿಯಾ ಯೋಜನೆ, ವಾರ್ಷಿಕ ಪಾಠ ಹಂಚಿಕೆ, ವಿದ್ಯಾರ್ಥಿ ಸ್ನೇಹಿ ದೈನಂದಿನ ವೇಳಾ ಪಟ್ಟಿ ಸಿದ್ಧವಾಗಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದರ ಮೂಲಕ ನಿಗದಿತ ವೇಳಾಪಟ್ಟಿಯಂತೆ ಬೋಧನೆಗೆ ಸನ್ನದ್ಧವಾಗಿರುವುದನ್ನು ಜಿಲ್ಲಾ ನೋಡಲ್ ಅಧಿಕಾರಿಗಳು, ಶಾಲಾ ಮೇಲುಸ್ತುವಾರಿ ಅಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರು ಖಾತ್ರಿಪಡಿಸಿಕೊಳ್ಳತಕ್ಕದ್ದು.
2023-24 ನೇ ಸಾಲಿನ ‘ಕಲಿಕಾ ಬಲವರ್ಧನೆ’ಗೆ ಸಂಬಂಧಿಸಿದ ‘ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ’ ಈಗಾಗಲೇ ವಿದ್ಯಾರ್ಥಿಗಳ ಕೈಯಲ್ಲಿದ್ದು, ಅದು ಚಟುವಟಿಕೆ ಆಧಾರಿತ ಹಾಗೂ ಕಲಿಕಾಫಲ ಆಧಾರಿತವಾಗಿದೆ. ಅದನ್ನು ಸೇತುಬಂಧ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳುವುದು ಹಾಗೂ ಶಿಕ್ಷಕರು ವಾರ್ಷಿಕ ಕ್ರಿಯಾಯೋಜನೆ ಮತ್ತು ಪಾಠಯೋಜನೆಗಳಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ, ಶಿಕ್ಷಕರ ಚಟುವಟಿಕೆ ಕೋಶಗಳಲ್ಲಿರುವ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು. ಜೊತೆಗೆ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಮಾಪನದಲ್ಲಿ ಬಳಸಿಕೊಳ್ಳುವುದು.
ಅನುಪಾಲನಾ ಅಧಿಕಾರಿಗಳು (ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಓ, ಬಿ.ಇ.ಓ, ಡಯಟ್ ಹಾಗೂ ಡಿ.ಡಿ.ಪಿ.ಐ ಕಛೇರಿಯ ಅಧಿಕಾರಿಗಳು) ಚಟುವಟಿಕೆ ಆಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು. ಅನುಪಾಲನಾ ಅಧಿಕಾರಿಗಳು ಶಿಕ್ಷಕರ ಸಮಾಲೋಚನ ಸಭೆ ಹಾಗೂ ವಿಷಯಾಧಾರಿತ ಸಭೆಗಳಲ್ಲಿ ಕಲಿಕಾ ಬಲವರ್ಧನೆಯ ಪ್ರಗತಿಯನ್ನು ಕಡ್ಡಾಯವಾಗಿ ಪರಿಶೀಲಿಸುವುದು. ಶಿಕ್ಷಕರು ಚಟುವಟಿಕೆ ಆಧಾರಿತ ಕಲಿಕೆಗೆ ಪ್ರೋತ್ಸಾಹಿಸುತ್ತ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹೊಮ್ಮಿಸುತ್ತ, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸರ್ವಪ್ರಯತ್ನ ಮಾಡುವುದು.
3. ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳ ಕುರಿತು:- ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳಾದ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನ ಉಪಾಹಾರ ಯೋಜನೆ, ಕ್ಷೀರಭಾಗ್ಯ, ಶೂ & ಸಾಕ್ಸ್ ಗಳಂತಹ ಸೌಲಭ್ಯಗಳು ಶೈಕ್ಷಣಿಕ ವರ್ಷದ ಮೊದಲ ದಿನದಂದು ಅಥವಾ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಲಭ್ಯವಿರುವುದನ್ನು ಖಾತರಿಪಡಿಸಿಕೊಳ್ಳತಕ್ಕದ್ದು.
4. ಸ್ಥಳೀಯ ಮಕ್ಕಳನ್ನು ಶಾಲೆಗೆ ದಾಖಲಿಸುವ ಕಾರ್ಯಕ್ರಮ:- ಪುತಿ ಸರ್ಕಾರಿ ಶಾಲೆಗೆ ಹೊಂದಿಕೊಂಡಿರುವ ಪ್ರದೇಶಗಳ ಹಾಗೂ ಅಕ್ಕ-ಪಕ್ಕದ ಪ್ರದೇಶಗಳ 6-14 ರ ವಯೋಮಾನದ ಮಕ್ಕಳು ಹತ್ತಿರದ ಶಾಲೆಗೆ ಸೇರಿರುವುದನ್ನು ಹಾಗೂ ಯಾವುದೇ ಮಗುವೂ ಸಹ ಶಾಲೆಯಿಂದ ಹೊರಗುಳಿದಿಲ್ಲ ಎಂಬ ಅಂಶವನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು. ಮಕ್ಕಳ ಜಾಥಾ, ಶಾಲೆ ಬಿಟ್ಟ ಮಕ್ಕಳ ಮನೆ ಭೇಟಿ, ವಲಸೆ ಬಂದಿರುವ ಹಾಗೂ ಅರ್ಹ ವಯಸ್ಸಿನ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು. ದಾನಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಸಹಾಯದಿಂದ ಬಾಲಕರಿಗೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸುವುದು. ಮಳೆಬಿಲ್ಲು ಕಲಿಕಾ ಹಬ್ಬ ಹಾಗೂ ಸಂಭ್ರಮದ ಶನಿವಾರ ಈ ಕಾರ್ಯಕ್ರಮಗಳ ಅನುಭವದ ಆಧಾರದ ಮೇಲೆ ಮಕ್ಕಳನ್ನು, ಪಾಲಕರನ್ನು ಆಕರ್ಷಿಸುವ ಕಾರ್ಯಕ್ರಮಗಳನ್ನು ಶಿಕ್ಷಕರು ಹಮ್ಮಿಕೊಂಡು ಶಾಲೆಯಲ್ಲಿ ದಾಖಲಾತಿ ಹೆಚ್ಚಾಗುವಂತೆ ಕ್ರಿಯಾಯೋಜನೆ ರೂಪಿಸಿಕೊಳ್ಳವುದು. ಸ್ಥಳೀಯ ಮಕ್ಕಳನ್ನು ಶಾಲೆಗೆ ದಾಖಲಿಸುವಂತಹ ಕಾರ್ಯಕ್ರಮಗಳನ್ನು ಎಸ್.ಡಿ.ಎಂ.ಸಿ ಸಹಕಾರದೊಂದಿಗೆ ಶಾಲಾ ಮೇಲುಸ್ತುವಾರಿ ಅಧಿಕಾರಿಗಳು, ಹಾಜರಾತಿ ಅಧಿಕಾರಿಗಳು, ಆಯಾ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಕೈಗೊಳ್ಳತಕ್ಕದ್ದು.
5. ಎಲ್ಲಾ ಸರ್ಕಾರಿ ಶಾಲೆಗಳಲ್ಲಿನ ಅಂತಿಮ ತರಗತಿಗಳಲ್ಲಿನ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ದಾಖಲಿಸುವ ಕುರಿತು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಅಂತಿಮ ತರಗತಿ ಅಂದರೆ ಶಾಲೆಗಳು 1-5, 1-6, 1-7 ಮತ್ತು 1-8 ಈ ತರಗತಿಗಳನ್ನು ಹೊಂದಿರುತ್ತದೆ. ಈ ಶಾಲೆಗಳಲ್ಲಿನ ಅಂತಿಮ ತರಗತಿಯಾದ 5 / 6 / 7 / 8 ನೇ ತರಗತಿಯಲ್ಲಿ ಹಿಂದಿನ ವರ್ಷ ಅಂದರೆ, 2023-24 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹತ್ತಿರದ ಶಾಲೆಯಲ್ಲಿ ದಾಖಲಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು. ಒಂದು ವೇಳೆ ವಿದ್ಯಾರ್ಥಿ ಯಾವುದೇ ಶಾಲೆಗೆ ದಾಖಲಾಗದೇ ಇದ್ದಲ್ಲಿ, ಆ ವಿದ್ಯಾರ್ಥಿಯನ್ನು ಹತ್ತಿರದ ಸರ್ಕಾರಿ ಶಾಲೆಯಲ್ಲಿ ಮುಂದಿನ ತರಗತಿಗೆ ದಾಖಲಿಸಲು ಈ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿದ್ದ ಹಿಂದಿನ ಶಾಲೆಯ ಮುಖ್ಯ ಶಿಕ್ಷಕರು ಕ್ರಮವಹಿಸುವುದು ಹಾಗೂ ಈ ಕುರಿತಾದ ಅಂಕಿ-ಅಂಶಗಳನ್ನು ಒಳಗೊಂಡ ದಾಖಲೆಯನ್ನು ನಿರ್ವಹಿಸುವುದು.
6. ಸರ್ಕಾರಿ ಶಾಲೆಗಳ ಮತ್ತು ಅಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ವ್ಯಾಪಕ ಪ್ರಚಾರ ಮಾಡುವುದು:- ಈ ಸಂದರ್ಭದಲ್ಲಿ ಶಿಕ್ಷಣದ ಮಹತ್ವದ ಕುರಿತು ವಿಶೇಷವಾಗಿ ಹೆಣ್ಣು ಮಗುವಿನ ಶಿಕ್ಷಣ, ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಉಚಿತ & ಗುಣಮಟ್ಟದ ಶಿಕ್ಷಣ, ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಸರ್ಕಾರಿ ಶಾಲೆಗಳು, ಸಿ.ಎಸ್.ಆರ್ ಹಾಗೂ ಹಳೆ ವಿದ್ಯಾರ್ಥಿಗಳ ಸಂಘಸ ಅಡಿ ಯಲ್ಲಿ ಸರ್ಕಾರಿ ಶಾಲೆಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ, ಆಯಾ ಸರ್ಕಾರಿ ಶಾಲೆಗಳ ವಿಶೇಷತೆಗಳು, ಬೋಧನಾ ಸೌಲಭ್ಯ, ಗಣಕಯಂತ್ರ ಶಿಕ್ಷಣ, ಗ್ರಂಥಾಲಯ, ಕ್ರೀಡಾ ಪರಿಕರಗಳು, ಇ-ಕಲಿಕೆ ಸೌಲಭ್ಯಗಳು ಸೇರಿದಂತೆ ಲಭ್ಯವಿರುವ ಸೌಲಭ್ಯಗಳು, ನಿಕಟಪೂರ್ವ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿನ ಸಾಧನೆಗಳು, ಶೈಕ್ಷಣಿಕ, ಕ್ರೀಡೆ, ವಿಜ್ಞಾನ, ಪ್ರತಿಭಾ ಕಾರಂಜಿ, ಸಹಪಠ್ಯ ಚಟುವಟಿಕೆ ಹಾಗೂ ಮತ್ತಿತರ ರಂಗಗಳಲ್ಲಿನ ಸಾಧನೆಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಆಯಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಕುರಿತು, ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳು, ಕೋವಿಡ್-19 ರ ಸಮಯದಲ್ಲಿ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳು ತೋರಿದ್ದ ಬಧ್ಯತೆ ಹಾಗೂ ಸರ್ಕಾರಿ ಶಾಲೆಗಳ ಮತ್ತಿತರ ಸೌಲಭ್ಯಗಳ ಕುರಿತಾದ ಆಕರ್ಷಕ ಭಿತ್ತಿ ಪತ್ರಗಳನ್ನು ಮತ್ತು ಕರಪತ್ರಗಳನ್ನು ದಾಖಲಾತಿ ಆಂದೋಲನದ ಸಮಯದಲ್ಲಿ ನೀಡುವುದರ ಮೂಲಕ ಪೋಷಕರಿಗೆ, ಸ್ಥಳೀಯರಿಗೆ ಮತ್ತು ಸಮುದಾಯಕ್ಕೆ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಗಳಿಗೆ ದಾಖಲಾಗುವಂತೆ ಪ್ರೇರೇಪಿಸುವುದು. ಈ ಸಂದರ್ಭದಲ್ಲಿ ಅಗತ್ಯಾನುಸಾರ ಗ್ರಂಥಾಲಯದ ಗ್ರಂಥಪಾಲಕರ, ಸ್ಥಳೀಯ ಸಂಸ್ಥೆಗಳ, ಜಿಲ್ಲಾಡಳಿತದ ಮತ್ತು ಸಂಬಂಧಿಸಿದ ಇಲಾಖೆಗಳ ಸಹಕಾರ-ಸಹಯೋಗವನ್ನು ಪಡೆಯತಕ್ಕದ್ದು.
7. ಒಟ್ಟಾರೆಯಾಗಿ ಮೇಲ್ಕಂಡ ಅಂಶಗಳನ್ನು ಹಾಗೂ ಈ ಸಂಬಂಧ ಸರ್ಕಾರದಿಂದ ಮತ್ತು ಇಲಾಖೆಯಿಂದ ಕಾಲ-ಕಾಲಕ್ಕೆ ನೀಡಲಾಗುವ ಸೂಚನೆಗಳನ್ನು ಸಮರ್ಪಕವಾಗಿ ಮತ್ತು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಸಕಾಲಿಕ ಕ್ರಮಗಳನ್ನು ವಹಿಸುವುದರ ಮೂಲಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಳೆದ ಸಾಲುಗಳಲ್ಲಿ ಇದ್ದ ವಿದ್ಯಾರ್ಥಿಗಳ ದಾಖಲಾತಿಯನ್ನು ಗಣನೀಯವಾಗಿ ಹೆಚ್ಚಿಸಲು ಹಾಗೂ ಸದರಿ ಅಂಕಿ-ಅಂಶಗಳನ್ನು ಕಾಲ-ಕಾಲಕ್ಕೆ ಸ್ಯಾಟ್ಸ್ ತಂತ್ರಾಂಶದಲ್ಲಿ ಇಂಧೀಕರಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ಸಂಬಂಧಿಸಿದ ಎಲ್ಲಾ ಜಿಲ್ಲಾ ನೋಡಲ್ ಅಧಿಕಾರಿಗಳು, ಶಾಲಾ ಮೇಲುಸ್ತುವಾರಿ ಅಧಿಕಾರಿಗಳು, ಹಾಜರಾತಿ ಅಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರಿಗೆ ಈ ಮೂಲಕ ಕ್ರಿಯಾಶೀಲವಾಗಿ ಮತ್ತು ಸಕ್ರಿಯವಾಗಿ ಕಾರ್ಯನಿರ್ವಹಿಸಲು ತಿಳಿಸಿದೆ.