ಬೆಂಗಳೂರು : ಸದ್ಯ ಯಾವುದೇ ರೀತಿಯಾದಂತಹ ಸಂಪುಟ ಪುನಾರಚನೆ ಮಾಡುವ ಪ್ರಸ್ತಾಪ ಇಲ್ಲ.ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ನಾವು ಲೋಕಸಭೆ ಚುನಾವಣೆಯಲ್ಲಿ 15ರಿಂದ 20 ಸೀಟ್ಗಳನ್ನು ಗೆದ್ದೇ ಗೆಲ್ಲುತ್ತೇವೆ ಯಡಿಯೂರಪ್ಪ ಅವರ ತರಹ 28ಕ್ಕೆ 28 ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ ಎಂದು ತಿಳಿಸಿದರು.
ಅದೇ ರೀತಿಯಾಗಿ ಪ್ರಧಾನಿ ಅಭ್ಯರ್ಥಿ ಅಂತಾ ಕರ್ನಾಟಕದಿಂದ ಯಾರೂ ಇಲ್ಲ. ಕೇಂದ್ರದಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಮ್ಮ ಕಾರ್ಯಕ್ರಮಗಳ ಜಾರಿ ಆಧಾರದಲ್ಲಿ ಚರ್ಚಿಸಿ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು.
ಇನ್ನು ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ದೇವರಾಜೇಗೌಡ ಪ್ರಜ್ವಲ್ ವಿರುದ್ಧ ಯಾಕೆ ದೂರು ಕೊಟ್ಟ? ಅದಾದ ಮೇಲೆ ಜೆಡಿಎಸ್ ಪ್ರಜ್ವಲ್ ವಿರುದ್ಧ ಯಾಕೆ ಕ್ರಮ ಕೈಗೊಂಡರು? ಅಲ್ಲದೆ ಚುನಾವಣೆಗೂ ಮುನ್ನ ದೇವೇಗೌಡ ಬಿಜೆಪಿ ನಾಯಕರಿಗೆ ಪ್ರಜ್ವಲ್ ಗೆ ಟಿಕೆಟ್ ಕೊಡಬೇಡಿ ಎಂದು ಪತ್ರ ಬರೆದಿದ್ದ ಆದರೂ ಕೂಡ ಬಿಜೆಪಿ ಟಿಕೆಟ್ ನೀಡಿತ್ತು ಯಾಕೆ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನೇಹಾ ಹಾಗೂ ಅಂಜಲಿ ಎಂಬುವರ ಹತ್ಯೆಯಾಗಿದೆ. ನಿಜಕ್ಕೂ ಇಂತಹ ಘಟನೆಗಳು ಆಗಬಾರದು. ಈ ಹಿಂದಿನ ಅವಧಿಗಿಂತ ಈಗ ಕಡಿಮೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚಾಗಿತ್ತು.
ಆದರೆ ಈಗ ಅಪರಾಧ ಪ್ರಕರಣಗಳು ನಮ್ಮ ಅವಧಿಯಲ್ಲಿ ಕಡಿಮೆಯಾಗಿದೆ. ಹಾಗಂತ ಈಗಿನ ಘಟನೆಗಳನ್ನ ನಾನು ಸಮರ್ಥಿಸಿಕೊಳ್ಳುವುದಿಲ್ಲ. ಕಠಿಣವಾಗಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ. ಏನೇನು ಕ್ರಮ ಸಾಧ್ಯವೇ ಅದನ್ನು ಕೈಗೊಳ್ಳುವಂತೆ ಪೋಲಿಸರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.