ಬೆಂಗಳೂರು : ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇ-ಆಫೀಸ್ ತಂತ್ರಾಂಶ ಅನುಷ್ಠಾನಗೊಳಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ) ಯ ಉಲ್ಲೇಖ (1) & (2) ರ ಸರ್ಕಾರಿ ಆದೇಶದಲ್ಲಿ ಇ- ಆಫೀಸ್ ತಂತ್ರಾಂಶವನ್ನು ಎಲ್ಲಾ ಇಲಾಖೆಗಳ ಮುಖ್ಯಸ್ಥರುಗಳ ಕಛೇರಿ/ ಪ್ರಾದೇಶಿಕ ಆಯುಕ್ತರುಗಳ ಕಛೇರಿ / ಜಿಲ್ಲಾಧಿಕಾರಿಗಳ ಕಛೇರಿ/ ಜಿಲ್ಲಾ ಪಂಚಾಯತ್ ಕಛೇರಿ/ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ (ಪ್ರಾದೇಶಿಕ ಮತ್ತು ಸಾಮಾಜಿಕ) ಗಳಲ್ಲಿ ಕಡ್ಡಾಯವಾಗಿ ಇ-ಆಫೀಸ್ ಅನುಷ್ಠಾನಗೊಳಿಸಿ, ತಾಲ್ಲೂಕು ಮಟ್ಟದ ಕಛೇರಿಗಳಲ್ಲಿ ಅನುಷ್ಠಾನ ಪ್ರಕ್ರಿಯೆ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿರುತ್ತದೆ.
ಮುಂದುವರೆದು, ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮತ್ತು ಜಿಲ್ಲಾ ಪಂಚಾಯತ್ ಕಛೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಂಡಿರುವ ಮೇರೆಗೆ, ಆಯಾಯ ಜಿಲ್ಲೆಗಳ ಉಪ ವಿಭಾಗಾಧಿಕಾರಿಗಳ ಕಛೇರಿ ಮತ್ತು ಎಲ್ಲಾ ತಾಲ್ಲೂಕು ಮಟ್ಟದ ತಹಶೀಲ್ದಾರ್ ಕಛೇರಿ ಹಾಗೂ ತಾಲ್ಲೂಕು ಪಂಚಾಯತ್ ಕಛೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ದಿನಾಂಕ: 01-04-2021 ರಿಂದ ಅನುಷ್ಠಾನಗೊಳಿಸುವಂತೆ ಉಲ್ಲೇಖ (3) ರಲ್ಲಿ ಆದೇಶಿಸಲಾಗಿರುತ್ತದೆ. ಅದರಂತೆ, ತಾಲ್ಲೂಕು ಮಟ್ಟದ ಎಲ್ಲಾ ತಹಶೀಲ್ದಾರ್‌ಗಳ ಕಛೇರಿ, ತಾಲ್ಲೂಕು ಪಂಚಾಯತ್ ಕಛೇರಿ, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಗಳು ಹಾಗೂ ಉಪನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಇ-ಕಛೇರಿ ತಂತ್ರಾಂಶವನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿರುತ್ತದೆ ಹಾಗೂ ರಾಜ್ಯದ ಎಲ್ಲಾ ನಿಗಮ/ ಮಂಡಳಿ/ ಆಯೋಗ/ ನಿಯಮಿತ ಕಂಪನಿ ಮತ್ತು ಇತರ ಸ್ನಾಯುತ್ತ ಸಂಸ್ಥೆಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗಳಿಸಲು ಉಲ್ಲೇಖ (4) ರ ಸರ್ಕಾರಿ ಆದೇಶದಲ್ಲಿ ಅದೇಶಿಸಲಾಗಿರುತ್ತದೆ. ಅದಾಗ್ಯೂ ಈವರೆಗೂ ಹಲವಾರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಛೇರಿಗಳು, ನಿಗಮ/ ಮಂಡಳಿ/ ಆಯೋಗ/ ನಿಯಮಿತ ಕಂಪನಿ ಮತ್ತು ಇತರೆ ಸ್ನಾಯುತ್ತ ಸಂಸ್ಥೆಗಳಲ್ಲಿ ಇ-ಕಛೇರಿ ತಂತ್ರಾಂಶದ ಅನುಷ್ಠಾನ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದಿಲ್ಲ (ಸಚಿವಾಲಯವಾರು ವಿವರವನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ).
ಆದ್ದರಿಂದ, ತಮ್ಮ ಸಚಿವಾಲಯದ ಅಧೀನದಲ್ಲಿ ಬರುವ ಯಾವ ಇಲಾಖೆಗಳು/ ಜಿಲ್ಲಾ ಮಟ್ಟದ ಕಛೇರಿಗಳು/ ತಾಲ್ಲೂಕು ಮಟ್ಟದ ಕಛೇರಿಗಳು/ ನಿಗಮ/ ಮಂಡಳಿ/ ವಿಶ್ವವಿದ್ಯಾಲಯಗಳು/ ಇತರೆ ಸ್ನಾಯುತ್ತ ಸಂಸ್ಥೆಗಳಲ್ಲಿ ಇ-ಆಫೀಸ್ ತಂತ್ರಾಂಶವು ಅನುಷ್ಠಾನಗೊಂಡಿರುವುದಿಲ್ಲವೋ ಅಂತಹ ಕಛೇರಿಗಳಲ್ಲಿ ತುರ್ತಾಗಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಕಡ್ಡಾಯವಾಗಿ ಕಡತ ನಿರ್ವಹಣೆಯನ್ನು ಇ-ಆಫೀಸ್ ತಂತ್ರಾಂಶದ ಮೂಲಕವೇ ನಿರ್ವಹಿಸಬೇಕೆಂದು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಈ ಮೂಲಕ ಕೋರಲಾಗಿದೆ.