ಹುಬ್ಬಳ್ಳಿ : ಇತ್ತೀಚಿಗೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಕೊಲೆಯಾದ ಅಂಜಲಿ ಅಂಬಿಗೇರ ಸಹೋದರಿ ಯಶೋಧ ಅಕ್ಕನ ಸಾವಿನಿಂದ ಮನನೊಂದು ಪಿನಾಯಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೆ ಅವರನ್ನು ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಯಶೋಧ ಗುಣಮುಖವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಇದೆ ವೇಳೆ ನಿನ್ನೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಂಜಲಿ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಘಟನೆ ನಡೆದು ನಾಲ್ಕು ದಿನಗಳ ಬಳಿಕ ಸಚಿವರು ಹಾಗೂ ಶಾಸಕರು ಆಗಮಿಸಿದ್ದಕ್ಕೆ ಸ್ಥಳೀಯರು ಆಕ್ರೋಶಗೊಂಡಿದ್ದರು.ಈ ವೇಳೆ ಸ್ಥಳೀಯ ನಾಯಕರು ಜನರನ್ನು ಸಮಾಧಾನಗೊಳಿಸಿದರು.
ಅಲ್ಲದೆ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಸಚಿವರು ಎರಡು ಲಕ್ಷ ರೂಪಾಯಿ ನೀಡಿದರು.ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಶನಿವಾರ ರಂದು ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ, ದಿಂಗಾಲೇಶ್ವರ ಶ್ರೀ, ಮನಸೂರಿನ ಬಸವರಾಜ ದೇವರು ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಮತ್ತು ಸಾರ್ವಜನಿಕರು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿದ್ದರು.