ಬೆಂಗಳೂರು : ಬಾಂಗ್ಲಾದೇಶದ ಮೂಲಕ ಅಕ್ರಮವಾಗಿ ಭಾರತಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ಬಾಂಗ್ಲಾದೇಶದ ಇಬ್ಬರು ಆರೋಪಿಗಳ ವಿರುದ್ಧ ಇದೀಗ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಹೌದು ಬಾಂಗ್ಲಾದೇಶದ ಪ್ರಜೆಗಳಿಂದ ಅಕ್ರಮ ಮಾನವ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಇದೀಗ NIA ಪೂರ್ವ ಚಾರ್ಜ್ ಶೀಟ್ ಸಲ್ಲಿಸಿದೆ. ಬಾಂಗ್ಲಾದೇಶ ಮೂಲದ ಮೊಹಮ್ಮದ್ ಸಹಜಲಾಲ್ ಹಲ್ದಾರ್ ಹಾಗೂ ಮೊಹಮ್ಮದ್ ಇದ್ರಿಸ್ ಎನ್ನುವ ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.
ಹತ್ತು ವರ್ಷಗಳ ಹಿಂದೆ ಆರೋಪಿಗಳು ಅಕ್ರಮವಾಗಿ ಭಾರತಕ್ಕೆ ಬಂದಿದ್ದರು. ಬೆಂಗಳೂರಿನಲ್ಲಿ ಆರೋಪಿಗಳು ಕಸ ವಿಲೇವಾರಿ ಕೆಲಸ ಮಾಡಿಕೊಂಡಿದ್ದರು. ನಂತರ ತಾವೇ ಸ್ವಂತವಾಗಿ ಕಸ ವಿಲೇವಾರಿ ಘಟಕವನ್ನು ಆರಂಭಿಸಿದ್ದರು. ಇದಕ್ಕಾಗಿ ಮಾರಗೊಂಡನಹಳ್ಳಿ ಹಾಗೂ ಸೀಗೆಹಳ್ಳಿಯಲ್ಲಿ ಜಾಗವನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ.
ಆ ಜಾಗದಲ್ಲಿ ಶೆಡ್ ನಿರ್ಮಿಸಿ ಅಕ್ರಮ ಬಾಂಗ್ಲಾ ವಲಸಿಗರನ್ನು ಇಟ್ಟಿದ್ದರು.ಕೆಲಸದ ಭರವಸೆ ನೀಡಿ ಕಳ್ಳ ಸಾಗಾಣಿಕೆ ಮೂಲಕ ಭಾರತಕ್ಕೆ ಕರೆತರುತ್ತಿದ್ದರು. ಭಾರತ ಬಾಂಗ್ಲಾ ಗಡಿ ಮೂಲಕ ಮಾನವ ಕಳ್ಳಸಾಗಣೆ ನಡೆಯುತ್ತಿತ್ತು. ಭಾರತದಲ್ಲಿ ಗುರುತಿನ ಚೀಟಿಯೊಂದಿಗೆ ಉತ್ತಮವಾದ ಕೆಲಸದ ಭರವಸೆ ನೀಡುತ್ತಿದ್ದರು.
ಆದರೆ ಬಳಿಕ ಪೊಲೀಸರಿಂದ ಬಂಧನದ ಬೆದರಿಕೆಯೊಡ್ಡಿ ಕಡಿಮೆ ಸಂಬಳ ನೀಡುತ್ತಿದ್ದರು. ಕಡಿಮೆ ಸಂಬಳ ನೀಡಿ ಬಾಂಗ್ಲಾದೇಶದ ಪ್ರಜೆಗಳಿಂದ ಆರೋಪಿಗಳು ದುಡಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಕಳೆದ ನವೆಂಬರ್ ನಲ್ಲಿ ಎನ್ಐಎ ಕೇಸ್ ದಾಖಲಿಸಿತ್ತು. ಬಳಿಕ ದೇಶಾದ್ಯಂತ ಅಕ್ರಮ ಬಾಂಗ್ಲಾ ವಲಿಸಿಗರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಹಲವರನ್ನು ಬಂಧಿಸಿ 12 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.
ಕರ್ನಾಟಕದಲ್ಲೂ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾಹಿತಿ ಪಡೆದು ಎನ್ಐಎ ದಾಳಿ ನಡೆಸಿತ್ತು. ಈ ಸಂಬಂಧ ಕಳೆದ ಫೆಬ್ರವರಿ ತಿಂಗಳಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಕರ್ನಾಟಕ ಆಂತರಿಕ ಭದ್ರತಾ ವಿಭಾಗದ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳಿಗಾಗಿ ಇದೀಗ ಎನ್ಐಎ ಹುಡುಕಾಟ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.