ಮಂಡ್ಯ : ಕಳೆದ ವರ್ಷ ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಮಂಡ್ಯ ಜಿಲ್ಲೆಯಲ್ಲಿ ಭ್ರೂಣಲಿಂಗ ಹತ್ಯೆ ಪ್ರಕರಣ ನಡೆದಿತ್ತು. ಇದೀಗ ಇತ್ತೀಚಿಗೆ ಪಾಂಡವಪುರದಲ್ಲೂ ಕೂಡ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಒಂದು ಘಟನೆ ಕುರಿತಂತೆ ಮಂಡ್ಯ ಸಂಸದ ಅಂಬರೀಶ್ ರವರು ಸರ್ಕಾರದ ವಿರುದ್ಧ ಕಿಡಿ ಕಾರಿಂದು ಭ್ರೂಣಲಿಂಗ ಪತ್ತೆ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಅಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಮಂಡ್ಯ ಜಿಲ್ಲೆಯ ಹಲವೆಡೆ ಹಲವು ತಿಂಗಳುಗಳ ಹಿಂದೆಯೇ ಬೆಳಕಿಗೆ ಬಂದ ಭ್ರೂಣಲಿಂಗ ಪತ್ತೆ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸಲು ರಾಜ್ಯ ಸರ್ಕಾರ ವಿಫಲವಾಗಿರುವುದು ವಿಷಾದನೀಯ ಹಾಗೂ ಖಂಡನೀಯ.
ಹಲವು ಬಾರಿ ಈ ಕುರಿತು ಜಿಲ್ಲಾ ಆರೋಗ್ಯಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಎಚ್ಚರಿಸಿದ್ದರೂ ಈ ಬಗ್ಗೆ ಅಸಡ್ಡೆ ಯಾಕೆ? ಈ ಕರಾಳ ದಂಧೆ ನಿರ್ಭಯವಾಗಿ ನಡೆಯುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಯಾಕೆ ತೋರಿದೆ ಪಾಂಡವಪುರ ಪಟ್ಟಣದ ಸರ್ಕಾರಿ ಕ್ವಾಟ್ರಸ್‌ನಲ್ಲಿ, ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ನೀಚ ಕೃತ್ಯ ಕಳವಳಕಾರಿ.
ಈ ಹಿಂದೆಯೇ ಈ ಪ್ರಕರಣಗಳು ಬೆಳಕಿಗೆ ಬಂದಾಗ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಪುನಃ ಇಂತಹ ಪ್ರಕರಣಗಳು ನಡೆಯುತ್ತಿದ್ದವೇ? ಈಗಲಾದರೂ ಈ ದುಷ್ಕೃತ್ಯದಲ್ಲಿ ಶಾಮೀಲಾದ ವೈದ್ಯಾಧಿಕಾರಿಗಳು ಸೇರಿದಂತೆ ಇತರ ತಪ್ಪಿತಸ್ಥರಿಗೆ ಸರ್ಕಾರ ಶಿಕ್ಷೆ ವಿಧಿಸುವುದೇ?
ಭ್ರೂಣ ಲಿಂಗ ಪತ್ತೆಯಿಂದಾಗಿ ಅದೆಷ್ಟೋ ಹೆಣ್ಣು ಶಿಶುಗಳು ಗರ್ಭದಿಂದ ಹೊರಬಂದು, ಹೊರ ಜಗತ್ತನ್ನು ಕಾಣುವ ಮೊದಲೇ ಹತ್ಯೆಯಾಗುತ್ತಿದ್ದಾರೆ. ಓರ್ವ ತಾಯಿಯಾಗಿ ಇಂತಹ ಹೇಯ ಕೃತ್ಯದ ಬಗ್ಗೆ ತಿಳಿದು ನೋವಾಗುತ್ತಿದೆ. ರಾಜ್ಯ ಸರ್ಕಾರ ಈ ರಾಕ್ಷಸ ಪ್ರವೃತ್ತಿಯ ಪ್ರಕರಣಗಳನ್ನು ಲಘುವಾಗಿ ಪರಿಗಣಿಸದೆ ಈ ಕೂಡಲೇ ಅಗತ್ಯ ಕ್ರಮ ಕೈಗೊಂಡು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದೇನೆ.