ಹುಬ್ಬಳ್ಳಿ : ಇತ್ತೀಚಿಗೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹತ್ಯೆ ಮಾದರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಯುವತಿಯ ಬರ್ಬರ ಕೊಲೆಯಾಗಿತ್ತು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಮೃತ ಅಂಜಲಿ ಅಂಬಿಗೇರ ಸಹೋದರಿ ಆರೋಪಿಯನ್ನ ಚೆನ್ನಮ್ಮ ಸರ್ಕಲ್ ನಲ್ಲಿ ನಾನು ಕೊಲ್ಲುತ್ತೇನೆ ಎಂದು ಆಕ್ರೋಶಭರಿತವಾಗಿ ಮಾತನಾಡಿದ್ದಾಳೆ.
ಹೌದು ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಆರೋಪಿಯಾದಂತಹ ವಿಶ್ವ ಅಲಿಯಾಸ್ ಗಿರೀಶ್ ಎನ್ನುವ ಯುವಕ ನಸುಕಿನ ಜಾವದಲ್ಲಿ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ಅಂಜಲಿ ಅಂಬಿಗರ ಎನ್ನುವ ಯುಗಾದಿಯ ಮನೆಗೆ ತೆರಳಿ ಚಾಕುವಿನಿಂದ ಭೀಕರವಾಗಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಇದೀಗ ಆತನನ್ನು ದಾವಣಗೆರೆ ರೇಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮೃತ ಅಂಜಲಿ ಸಾವಿನಿಂದ ಇದೀಗ ಇಡೀ ಕುಟುಂಬ ದುಃಖದ ಮಡುವಿನಲ್ಲಿದೆ ಇದೆ. ಅಂಜಲಿ ಸಹೋದರಿ ಯಶೋಧ ಮಾಧ್ಯಮದೊಂದಿಗೆ ಮಾತನಾಡಿ, ನನ್ನ ಅಕ್ಕಳನ್ನ ಕೊಂದವನನ್ನು ಕಾನೂನು ಹಾಗೂ ಸರ್ಕಾರ ಬಿಡಬಹುದು. ಆದರೆ ನಾನು ಬಿಡುವುದಿಲ್ಲ ನನ್ನ ಅಕ್ಕಳನ್ನ ಯಾವ ಚಾಕುನಿಂದ ಕೊಂದಿದ್ದಾನೋ ನಾನು ಅದೇ ಚಾಕುನಿಂದ ಆತನನ್ನು ಕೊಲೆ ಮಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದಳು.
ಮುಂದೆ ಯಾವುದೇ ರೀತಿಯಾದ ಹೆಣ್ಣು ಮಕ್ಕಳಿಗೆ ಈ ರೀತಿ ಆಗಬಾರದು. ಹಾಗೆ ಆತನಿಗೆ ಪಾಠ ಕಲಿಸುತ್ತೇನೆ.ನೇಹಾ ಹಿರೇಮಠ ಬೇರೆ ಅಲ್ಲ ನನ್ನ ಅಕ್ಕ ಬೇರೆಯಲ್ಲ. ಇಬ್ಬರೂ ನನ್ನ ಅಕ್ಕಂದಿರೆ. ಈಗ ಆತನಿಗೆ ಜೈಲು ಶಿಕ್ಷೆ ಆಗಬಹುದು ಆದರೆ ಅವನ ಪರವಾಗಿ ಇರುವವರು ಬೇಲ್ ನೀಡಿ ಆತನನ್ನು ಬಿಡಿಸಿಕೊಂಡು ಹೋಗುತ್ತಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಆತನನ್ನು ಬಿಡುವುದಿಲ್ಲ. ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ನಲ್ಲಿ ಆತನನ್ನು ಕೊಲ್ಲುತ್ತೇನೆ ಎಂದು ಆಕ್ರೋಶ ಭರಿತ ಮಾತುಗಳನ್ನಾಡಿದಳು.
ಘಟನೆ ಹಿನ್ನೆಲೆ?
ಆರೋಪಿ ಗಿರೀಶ್ ಮೈಸೂರಿನ ಮಹಾರಾಜ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಅಂಜಲಿ ಹಾಗೂ ಗಿರೀಶ್ ಪರಿಸ್ಪರ ಪ್ರೀತಿಸುತ್ತಿದ್ದರು. ಒಂದು ವಾರದ ಹಿಂದೆ ಅಂಜಲಿ 2 ಸಾವಿರ ರೂ. ಹಣ ಕೇಳಿದ್ದರು. ಆದರೆ ಗಿರೀಶ್ 1ಸಾವಿರ ರೂ. ಮಾತ್ರ ಫೋನ್ ಪೇ ಮಾಡಿದ್ದ. ನಂತರ ಅಂಜಲಿ ಗಿರೀಶ್ ನಂಬರ್ ಬ್ಲ್ಯಾಕ್ ಲೀಸ್ಟ್ ನಲ್ಲಿ ಹಾಕಿದ್ದಳು. ಇದರಿಂದ ಸಿಟ್ಟಿಗೆದ್ದ ಗಿರೀಶ್ ಮುಂಜಾನೆ 4,30 ರ ಸುಮಾರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.
ಕೊಲೆ ಮಾಡಿದ ಬಳಿಕ ಗಿರೀಶ್ ಹುಬ್ಬಳ್ಳಿಯಿಂದ ಹಾವೇರಿಗೆ ಬಂದಿದ್ದ. ಹಾವೇರಿಯಿಂದ ಮೈಸೂರಿಗೆ ರೈಲು ಹತ್ತಿದ್ದ. ಮೈಸೂರಿಗೆ ಹೋಗಿ ರಾತ್ರಿ ಉಳಿದುಕೊಂಡು ಮತ್ತೆ ಮೈಸೂರಿನಿಂದ ಹುಬ್ಬಳ್ಳಿಗೆ ರೈಲಿನಲ್ಲಿ ತೆರಳುತ್ತಿದ್ದ ಈತ ರೈಲಿನಲ್ಲಿಯೂ ಕಿರುಕ್ ಮಾಡಿದ್ದ. ರೈಲಿನಲ್ಲಿ ತುಮಕೂರು ಮೂಲದ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಈ ವೇಳೆ ಉಳಿದ ಪ್ರಯಾಣಿಕರು ಆರೋಪಿ ಗಿರೀಶ್ ನನ್ನು ಹಿಡಿದು ಥಳಿಸಿದ್ದರು. ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಂಜಲಿಯನ್ನು ಕೊಲೆ ಮಾಡಿದ ಬಳಿಕ ಹುಬ್ಬಳ್ಳಿಯಿಂದ ಹಾವೇರಿಗೆ ತೆರಳಿದ್ದ ಆರೋಪಿ ಬಳಿಕ ಹಾವೇರಿಯಿಂದ ಮೈಸೂರಿಗೆ ರೈಲಿನಲ್ಲಿ ಹೋಗಿದ್ದ. ಬಳಿಕ ಮಹಾರಾಜ ಹೋಟೆಲ್ ನಲ್ಲಿ ಮಲಗಿದ್ದ. ನಂತರ ಮೈಸೂರಿನಿಂದ ಹುಬ್ಬಳ್ಳಿಗೆ ವಾಪಾಸ್ ಆಗುತ್ತಿದ್ದಾಗ ದಾವಣಗೆರೆಯ ಮಾಯಕೊಂಡದ ರೈಲು ನಿಲ್ದಾಣದಲ್ಲಿ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಈ ವೇಳೆ ಆರೋಪಿ ಗಿರೀಶನನ್ನು ಪೊಲೀಸರು ಬಂಧಿಸಿದ್ದಾರೆ.