ಬೆಂಗಳೂರು : 2024-25ನೇ ಶೈಕ್ಷಣಿಕ ಸಾಲಿಗೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿಕಲಿ ಘಟಕಗಳಲ್ಲಿ ಅನುಷ್ಟಾನಗೊಳಿಸಬೇಕಿರುವ ಪ್ರಮುಖ ಚಟುವಟಿಕೆಗಳು, ಮೇಲ್ವಿಚಾರಣೆಯ ಕ್ರಮಗಳು ಹಾಗೂ ಅನುಪಾಲನೆಗೆ ಅಗತ್ಯ ಕ್ರಮವಹಿಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕನ್ನಡ ಮಾಧ್ಯಮದ 01 ರಿಂದ 03ನೇ ತರಗತಿವರೆಗೂ ಹಾಗೂ ಉರ್ದು ಮಾಧ್ಯಮದ 01 ಮತ್ತು 02ನೇ ತರಗತಿವರೆಗೂ ನಲಿಕಲಿ ಬೋಧನಾ ಕಲಿಕಾ ಪದ್ಧತಿಯನ್ನು ಅನುಷ್ಟಾನಿಸಿ ಅನುಪಾಲನೆಗೊಳಿಸಲಾಗುತ್ತಿದ್ದು, ಸದರಿ ಸುತ್ತೋಲೆಯು ನಲಿಕಲಿ ಘಟಕಗಳಲ್ಲಿ ಕಡ್ಡಾಯವಾಗಿ ಅನುಷ್ಟಾನಗೊಳಿಸಬೇಕಿರುವ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. 2024-25ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ನೂತನ ಅಭ್ಯಾಸ ಸಹಿತ ನಲಿಕಲಿ ಪಠ್ಯಪುಸ್ತಕಗಳು ಅನುಷ್ಟಾನಕ್ಕೆ ಒಳಪಡುತ್ತಿರುವ ಕಾರಣ, ಕೆಲವು ಅಗತ್ಯ ಮಾರ್ಪಾಡುಗಳನ್ನು ನಲಿಕಲಿ ತರಗತಿಗಳಲ್ಲಿ ಅಳವಡಿಸುವುದು ಅಗತ್ಯವಾಗಿದ್ದು, ಈ ಬಗ್ಗೆ ವಿವಿಧ ಹಂತದ ಅಧಿಕಾರಿಗಳು ಮತ್ತು ಶೈಕ್ಷಣಿಕ ಮಾರ್ಗದರ್ಶಕರು/ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಧ್ಯಯನಶೀಲರಾಗಿ ಕಾರ್ಯಪ್ರವೃತ್ತರಾಗುವಂತೆ ಈ ಮೂಲಕ ನಿರ್ದೇಶಿಸಿದೆ.
ನಲಿಕಲಿ ತರಗತಿ ಕಲಿಕಾ ಪ್ರಕ್ರಿಯೆಯಲ್ಲಿ ಮೂರು ಮುಖ್ಯ ಕಾರ್ಯಕ್ರಮಗಳಾದ 1. ವಿದ್ಯಾ ಪ್ರವೇಶ/ಶಾಲಾ ಸಿದ್ಧತಾ ಕಾರ್ಯಕ್ರಮ 2. ಸೇತು ಬಂಧ ಮತ್ತು 3. ಹತ್ತು ಮೈಲುಗಲ್ಲುಗಳಾಗಿ ವಿಭಜಿಸಿರುವ ಕಲಿಕಾಂಶಗಳ ಕಲಿಕೆಯನ್ನು ಪ್ರಮುಖವಾಗಿ ಅನುಷ್ಟಾನಕ್ಕೆ ಒಳಪಡಿಸಬೇಕಿದೆ. ಇವುಗಳ ಅನುಷ್ಟಾನಾತ್ಮಕ ಕ್ರಮಗಳನ್ನು ಈ ಕೆಳಕಂಡಂತೆ ಸೂಚಿಸಲಾಗಿದ್ದು, ಶಾಲೆಗಳಲ್ಲಿ ಇವುಗಳ ಅಳವಡಿಕೆ ಮತ್ತು ನಿರಂತರ ಅನುಪಾಲನೆಗೆ ಪ್ರತೀ ಜಿಲ್ಲೆ ಹಾಗೂ ಬ್ಲಾಕ್ ಹಂತದ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಈ ಮೂಲಕ ತಿಳಿಸಲಾಗಿದೆ.