ಬೆಂಗಳೂರು : ಕಂದಾಯ ಇಲಾಖೆಯನ್ನು ಆಧುನೀಕರಣ ಮಾಡಬೇಕು, ಬೆರಳ ತುದಿಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಮಾಡಲಾಗುತ್ತಿದೆ. ಅದರ ಒಂದು ಭಾಗವಾಗಿ ಸಹ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈ ಸಂಬಂಧ ಗ್ರಾಮಾಧಿಕಾರಿಗಳು 19 ಲಕ್ಷ ರೈತರನ್ನು ಸಂಪರ್ಕಿಸಿದ್ದಾರೆ. ಈ ಪೈಕಿ 10 ಲಕ್ಷ ರೈತರ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಅದರಲ್ಲಿ 6 ಲಕ್ಷ ಪಹಣಿಗಳಿಗೆ ಸಂಬಂಧಿಸಿದಂತೆ ಅದರ ಖಾತೆದಾರರು ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರ ಹೆಸರಿನಲ್ಲಿ ಪಹಣಿಗಳು ಇದ್ದರೆ ದುರಪಯೋಗ ಆಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಆಧಾರ್ ಜೋಡಣೆ ಮಾಡುವುದರಿಂದ ಯಾರದ್ದೋ ಆಸ್ತಿ ಮತ್ತಾರೋ ನೋಂದಣಿ ಮಾಡಿಸಿಕೊಳ್ಳುವಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದಾಗಿದೆ.
ಇನ್ನೂ ಆಸ್ತಿಗಳ ನೋಂದಣಿ ಸಮಯದಲ್ಲಿಯೂ ಸಹ ಆಧಾರ್ ಕಡ್ಡಾಯವಾಗಿ ಕೇಳಲಾಗುತ್ತದೆ. ಆಗ ಆಧಾರ್ ಸಂಖ್ಯೆ ಕೊಡದಿದ್ದರೆ ಅದು ಅನುಮಾನಕ್ಕೆ ಕಾರಣವಾಗಿ ಅದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ತದನಂತರ ನೋಂದಣಿ ಮಾಡಿದರೆ ಒಂದಷ್ಟು ಅಕ್ರಮಗಳನ್ನು ತಡೆದಂತಾಗುತ್ತದೆ ಎಂದು ಆಧಾರ್ ಜೋಡಣೆಯ ಆಗತ್ಯವಾಗಿದೆ. ಈ ವೇಳೆಯಲ್ಲಿ ಕೃಷಿ ಭೂಮಿ ಮಾತ್ರ ಪರಿಗಣಿಸಲಾಗುತ್ತದೆ. ಪಹಣಿಯಲ್ಲಿ ಜಮೀನು ಮಾಲೀಕರ ಮಾಹಿತಿ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವರೂಪ, ಬೆಳೆ ಮೊದಲಾದ ಮಾಹಿತಿ ಇರುತ್ತದೆ. ಆಧಾರ್ ಸಂಖ್ಯೆ ಕೂಡ ನಮೂದಿಸಲಾಗಿರುತ್ತದೆ ಎನ್ನಲಾಗಿದೆ.
ಇದಲ್ಲದೇ ಗ್ರಾಮಾಧಿಕಾರಿಗಳೇ ಮನೆ ಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯ ಮಾಡುತ್ತಾರೆ. ಸಾರ್ವಜನಿಕರೂ ಸಹ ತಮ್ಮ ಸಮೀಪದ ಕಂದಾಯ ಕಚೇರಿಗೆ ತೆರಳಿ ಆಧಾರ್ ಜೋಡಣೆ ಮಾಡಿಸಲು ಸಹ ಅವಕಾಶ ನೀಡಲಾಗಿದೆ ಆಧಾರ್ ಸಂಖ್ಯೆ ಮತ್ತು ಫೋಟೋ ಜೋಡಣೆ ಆಗುವುದರಿಂದ ಜಮೀನು ಸುರಕ್ಷಿತವಾಗಿರುತ್ತದೆ. ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವುದು ತಪ್ಪುತ್ತದೆ. ಇದರಿಂದ ಅಮಾಯಕ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.