ರಾಮನಗರ : ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿಯೊಬ್ಬ ತನ್ನ ಪತ್ನಿಯ ವಿಚ್ಛೇದನಕ್ಕೆ ಮುಂದಾಗಿದ್ದಾಳೆ ಎಂದು ತಿಳಿದು ಆಕೆಯ ತಲೆಗೆ ರಾಡ್ ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಮುದುವಾಡಿ ಗೇಟ್ ಬಳಿ ನಡೆದಿದೆ.ಪಿಚ್ಚನಕೆರೆ ಗ್ರಾಮದ ಮಂಜುಳಾ, ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ.
ಮದುವೆಯಾದ ಹೊಸತರಲ್ಲಿ ಎಲ್ಲವು ಚೆನ್ನಾಗಿಯೇ ಇತ್ತು.ರಾಜೇಶ್ ಎಂಬಾತನೊಂದಿಗೆ ಮಂಜುಳಾ ಪೋಷಕರು ಮದುವೆ ಮಾಡಿ ಕೊಟ್ಟಿದ್ದರು. ಆದರೆ ದಿನ ಕಳೆದಂತೆ ಪತ್ನಿ ಜೊತೆಗೆ ರಾಜೇಶ್ ಜಗಳವಾಡಲು ಆರಂಭಿಸಿದ್ದ ಇದರಿಂದ ಬೇಸತ್ತ ಇಬ್ಬರು ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಅಲ್ಲದೆ ವಿಚ್ಛೇದನಕ್ಕೆ ಇಬ್ಬರು ಕೂಡ ಅರ್ಜಿ ಸಲ್ಲಿಸಿದ್ದರು.ಇದಾದ ಮೇಲೂ ಕೂಡ ಪತಿ ರಾಜೇಶ್ ಪತ್ನಿ ಮಂಜುಳಾ ಜೊತೆಗೆ ಗಲಾಟೆ ಮುಂದುವರೆಸಿದ್ದ.
ಇಂದು ದೊಡ್ಡಮುದುವಾಡಿ ಗೇಟ್ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ರಾಡ್‌ನಿಂದ ತಲೆಗೆ ಹೊಡೆದು ಪತಿ ರಾಜೇಶ್ ಅಲ್ಲಿಂದ ಪರಾರಿಯಾಗಿದ್ದಾನೆ.ತಲೆಗೆ ಬಿದ್ದ ಬಲವಾದ ಹೊಡೆತದಿಂದ ಮಂಜುಳಾ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಆರೋಪಿಗೆ ಶೋಧಕಾರ್ಯ ಮುಂದುವರಿಸಿದ್ದಾರೆ.