ಬೆಂಗಳೂರು : ವಿಚ್ಛೇದನ ಪಡೆದುಕೊಳ್ಳಲು ಎರಡು ಆರೋಪಗಳಿದ್ದ ಸಂದರ್ಭದಲ್ಲಿ ಒಂದು ಆರೋಪ ಸಾಬೀತಾದರೂ ಕೂಡ, ವಿಚ್ಛೇದನ ಪಡೆದುಕೊಳ್ಳಬಹುದು. ಎಲ್ಲಾ ಆರೋಪಗಳು ಸಾಬೀತಾಗಬೇಕಿಲ್ಲ ಎಂದು ಹೈಕೋರ್ಟ್ ತಿಳಿಸಿತು.
ಪ್ರಕರಣದಲ್ಲಿ ಪತಿಯ ಮಾನಸಿಕ ಕ್ರೌರ್ಯ ಮತ್ತು ಪರಿತ್ಯಾಗದ ಕಾರಣವನ್ನು ಪರಿಗಣಿಸಿ ವಿಚ್ಛೇದನ ನೀಡಲು ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡುವಂತೆ ತುಮಕೂರಿನ ನವ್ಯ ಎಂಬ ಮಹಿಳೆಯ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅನು ಶಿವರಾಮನ್ ಅವರಿದ್ದ ವಿಭಾಗೀಯ ಪೀಠ ಈ ಒಂದು ತೀರ್ಪು ನೀಡಿದೆ.
ಪ್ರಕರಣದಲ್ಲಿ ಪತಿಯ ಮಾನಸಿಕ ಕ್ರೌರ್ಯ ಮತ್ತು ಪರಿತ್ಯಾಗದ ಕಾರಣವನ್ನು ಪರಿಗಣಿಸಿ ವಿಚ್ಛೇದನ ನೀಡಲು ಪತ್ನಿ ಕೋರಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದಾಗ ಪತ್ನಿ ತನ್ನ ಸಹೋದ್ಯೋಗಿಯೊಬ್ಬನ ಜತೆ ಸಂಬಂಧ ಹೊಂದಿದ್ದರು. ಆತನನ್ನು ಮದುವೆಯಾಗಲೆಂದೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪತಿ ಧ್ರುವ ಆಧಾರರಹಿತ ಆರೋಪ ಮಾಡಿರುವುದು ಸಾಬೀತಾಗಿದೆ. ಇದು ಪತ್ನಿಯ ಚಾರಿತ್ರ್ಯವನ್ನು ಹಾಳು ಮಾಡುವುದು ಬಿಟ್ಟು ಮತ್ತೇನು ಅಲ್ಲ ಮತ್ತು ಪತ್ನಿ ಮೇಲೆ ಎಸಗಿದ ಮಾನಸಿಕ ಕ್ರೌರ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಹೀಗಿದ್ದರೂ ವಿಚ್ಛೇದನ ಮಂಜೂರಾತಿಗೆ ಮಾಡಲಾದ ಎರಡು ಆರೋಪಗಳು ಸಹ ಸಾಬೀತಾಗಬೇಕು ಎಂದು ಕಾನೂನು ಕಡ್ಡಾಯಗೊಳಿಸುವುದಿಲ್ಲ. ಒಂದು ಆರೋಪ (ಕಾರಣ) ಸಾಬೀತಾದರೂ, ವಿಚ್ಛೇದನ ಮಂಜೂರಾತಿಗೆ ಅದು ಸಾಕಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಪ್ರಕರಣದ ಅರ್ಜಿದಾರರ ವಿವಾಹ ಅನೂರ್ಜಿತೊಗಳಿಸಿ ವಿಚ್ಛೇದನ ನೀಡಿದೆ.