ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ವಸಂತ ಬಂಗೇರ(79) ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಮೂಲಕ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ವಸಂತ ಬಂಗೇರ ಇನ್ನಿಲ್ಲವಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ ಕೇದೆ ಸುಬ್ಬ ಪೂಜಾರಿ ಹಾಗೂ ದೇವಕಿ ದಂಪತಿಯ ಪುತ್ರರಾಗಿ ವಸಂತ ಬಂಗೇರ ಅವರು ಜನವರಿ.15, 1946ರಲ್ಲಿ ಜನಿಸಿದ್ದರು. ಬೆಳ್ತಂಗಡಿಯ ಬೋರ್ಡ್ ಹೈಸ್ಕೂಲಿನಲ್ಲಿ ತಮ್ಮ ಎಸ್ ಎಸ್ ಎಲ್ ಸಿ ವ್ಯಾಸಂಗ ಮುಗಿಸಿದಂತ ಅವರು ಮುಲ್ಕಿ, ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು.
1972ರಲ್ಲೇ ಚುನಾವಣಾ ರಾಜಕೀಯಕ್ಕೆ ಧುಮುಕಿದಂತ ವಸಂತ ಬಂಗೇರ ಅವರು, ಕುವೆಟ್ಟು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ, ಸದಸ್ಯರಾಗಿ, ಆನಂತ್ರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
1983ರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಕಣಕ್ಕೆ ಇಳಿದರು. ಪ್ರಥಮ ಬಾರಿಗೆ ವಿಧಾನಸಭೆಯ ಸದಸ್ಯರಾಗಿಯೂ ಪ್ರವೇಶ ಮಾಡಿದ್ದರು. 1989ರಲ್ಲಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಿ ಚುನಾವಣೆಗೆ ಸ್ಪರ್ಧಿಸಿದಂತ ಅವರು ಸೋಲು ಕಂಡಿದ್ದರು. 1994ರಲ್ಲಿ ಜೆಡಿಎಸ್ ನಿಂದ ಮತ್ತೆ ಸ್ಪರ್ಧಿಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದೇ ಅವಧಿಯಲ್ಲಿ ವಿಧಾನಸಭೆಯ ಮುಖ್ಯ ಸಚೇತಕರಾಗಿಯೂ ಸೇವೆ ಸಲ್ಲಿಸಿದ್ದರು.
2008ರಲ್ಲಿ ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷ ಸೇರಿದಂತೆ ಅವರು, ನಾಲ್ಕನೇ ಅವಧಿಗೆ ಬೆಳ್ತಂಗಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2013ರಲ್ಲಿ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಂತ ಅವರು ಸಿದ್ಧರಾಮಯ್ಯ ಸರ್ಕಾರದಲ್ಲಿ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.
ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂದು ವರ್ಗದವರನ್ನು ಅಗಲಿದ್ದಾರೆ. ನಾಳೆ ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ, ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾವೆ.
ಅಶ್ಲೀಲ ವೀಡಿಯೋ ಹಂಚಿದ ಕಾರು ಚಾಲಕ ಕಾರ್ತಿಕ್ ಎಲ್ಲಿ?: SITಗೆ ಮಾಜಿ ಸಿಎಂ HDK ಪ್ರಶ್ನೆ