ಬೆಳಗಾವಿ : ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ 52,009 ಕೋಟಿ ರೂ.ಗನ್ನು ಇಟ್ಟಿದ್ದೇವೆ. ಅಭಿವೃದ್ಧಿ ಕೆಲಸಗಳಿಗೆ 68 ಸಾವಿರ ಕೋಟಿಗಳನ್ನೂ ಸೇರಿದಂತೆ 2024-25 ರಲ್ಲಿ ಒಟ್ಟು 1.20 ಲಕ್ಷ ಕೋಟಿ ಇಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮೊದಲು ನಮ್ಮ ಗ್ಯಾರಂಟಿಗಳನ್ನು ಆಡಿಕೊಂಡರು. ಬಳಿಕ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಸುಳ್ಳು ಹರಡಿದರು. ಅಭಿವೃದ್ಧಿ ಕೆಲಸಗಳು ನಿಲ್ಲುತ್ತವೆ ಎಂದರು, ಲೋಕಸಭಾ ಚುನಾವಣೆ ತನಕ ಮಾತ್ರ ನೀಡಿ, ನಂತರ ನಿಲ್ಲಿಸುತ್ತಾರೆ ಎಂಬ ಸುಳ್ಳುಗಳನ್ನು ಸೃಷ್ಟಿಸಿದ್ದಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಇವರಿಂದ ಸಂವಿಧಾನ ಉಳಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಹಾಗಾಗಿ ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, Bharatiya Janata Party (BJP) 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ, ಸಮ ಸಮಾಜದ ಗ್ಯಾರಂಟಿ ನೀಡುತ್ತದೆ. ಇದಕ್ಕೆ ವಿರುದ್ಧವಾಗಿ ಬಿಜೆಪಿಯವರು ನಡೆಯುತ್ತಿದ್ದಾರೆ. ಅಂಬೇಡ್ಕರ್ ಅವರು ದೇಶಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಸಾಕಾಗುವುದಿಲ್ಲ, ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆಯುವಂತಾಗಬೇಕು ಎಂದಿದ್ದಾರೆ. ಈ ಶಕ್ತಿಯನ್ನು ದುರ್ಬಲರಿಗೆ ತುಂಬವ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ ಎಂದರು.
ರಾಜ್ಯದ ಬಡ ಜನರ ತುತ್ತಿನ ಚೀಲ ತುಂಬಿಸುವ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಪೂರೈಸಲು ಕೋರಿದಾಗ, ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲು ಒಪ್ಪಲಿಲ್ಲ. ಆದ್ದರಿಂದ ನಮ್ಮ ಸರ್ಕಾರ ಅಕ್ಕಿ ಬದಲು ಕೆಜಿಗೆ 34 ರೂ. ನಂತೆ 5 ಕೆ.ಜಿ ಗೆ 170 ರೂ. ಹಾಗೆ ಜುಲೈ ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿದೆ.
ಗೃಹಜ್ಯೋತಿಯನ್ನು ಜುಲೈ ತಿಂಗಳಲ್ಲಿ ಜಾರಿ ಮಾಡಲಾಯಿತು. 1.60 ಕೋಟಿ ಫಲಾನುಭವಿಗಳಿಗೆ ಅಂದರೆ ರಾಜ್ಯದ ಸುಮಾರು 92% ಜನರಿಗೆ ಇದರಿಂದ ಲಾಭವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 1.21 ಕೋಟಿ ಮನೆ ಯಜಮಾನಿಯರಿಗೆ ತಲಾ 2,000 ರೂ.ನಂತೆ ಆಗಸ್ಟ್ ತಿಂಗಳಿನಿಂದ ಜಾರಿ ಮಾಡಲಾಯಿತು. ನಿರುದ್ಯೋಗಿ ಪದವೀಧರರಿಗೆ 2 ವರ್ಷಗಳವರೆಗೆ ತಿಂಗಳಿಗೆ 3000 ರೂ. ಹಾಗೂ ಡಿಪ್ಲೋಮಾ ಮಾಡಿದವರಿಗೆ ತಲಾ 2000 ರೂ. ನೀಡುವ ಯುವನಿಧಿ ಯೋಜನೆಯನ್ನು ವಿವೇಕಾನಂದರ ಜನ್ಮದಿನಾಚರಣೆಯಂದು ಜಾರಿ ಮಾಡಲಾಯಿತು. ಈ ಅವಧಿಯಲ್ಲಿ ಬೇಡಿಕೆಯಿರುವ ತರಬೇತಿಯನ್ನು ಯುವಜನರಿಗೆ ನೀಡಿ, ಅವರಿಗೆ ಉದ್ಯೋಗ ದೊರೆಯಲು ಶಕ್ತಿ ತುಂಬಲಾಗುವುದು ಎಂದು ಹೇಳಿದ್ದಾರೆ.