ದೊಡ್ಡಬಳ್ಳಾಪುರ : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಹೆಂಡತಿಯನ್ನು ಪತಿಯೇ ಕೊಲೆ ಮಾಡಿ ಪತ್ನಿ ಕಾಣೆಯಾಗಿದ್ದಾಳೆ ಎಂದು ಠಾಣೆಗೆ ಬಂದು ದೂರು ನೀಡಿದ್ದ ಪತಿಯೇ ಈಗ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿ 19 ವರ್ಷದ ವೀಣಾ, ಏಪ್ರಿಲ್ 22ರಂದು ಸೋಮವಾರ ನಾಪತ್ತೆಯಾಗಿದ್ದರು. ಗಾಬರಿಗೊಂಡ ಆಕೆಯ ಗಂಡ ರವಿ ಹೆಂಡತಿ ಕಾಣೆಯಾದ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅದಾದ ಒಂದು ವಾರಕ್ಕೆ ತೂಬಗೆರೆಯ ನಾರಸಿಂಹನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಫಾರೆಸ್ಟ್ ಗಾರ್ಡ್‌ಗೆ ಸುಟ್ಟು ಕರಕಲಾಗಿರುವ ಅಪರಿಚಿತ ಶವ ಕಣ್ಣಿಗೆ ಬಿದ್ದಿತ್ತು.
ಈಕೆಯನ್ನು ಕೊಂದವರ ತನಿಖೆ ಕೈಗೆತ್ತಿಕೊಂಡ ಪೊಲೀಸರು, ವೀಣಾಳ ಅತ್ತೆ, ಮಾವ, ಆಕೆಯ ಗಂಡ ಮತ್ತು ಸಂಬಂಧಿಕರ ವಿಚಾರಣೆ ನಡೆಸಿದಾಗ ಆಕೆಯ ಗಂಡನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿ ರವಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಹೆಂಡತಿಯನ್ನು ಕೊಂದಿದ್ದು ನಾನೇ ಎಂದು ಆತ ಬಾಯಿ ಬಿಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.