ಉತ್ತರ ಕನ್ನಡ: ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಜನರ, ಬಡವರ ಪರವಾಗಿ ಇಲ್ಲವಾಗಿದೆ. ಕೋರೊನಾ ಸಮಯದಲ್ಲಿ ಆಕ್ಸಿಜನ್ ಇಲ್ಲದೆ ಜನ ಸತ್ತರು, ಚಿಕಿತ್ಸೆ ಸರಿಯಾಗಿ ಸಿಗದೆ ರಾಜ್ಯದಲ್ಲಿ 4 ಲಕ್ಷ ಜನ ಸತ್ತಿದ್ದಾರೆ. ಈಗ ವ್ಯಾಕ್ಸಿನ್ ತೆಗೆದುಕೊಂಡವರು ಸಾಯುವ ಕಾಲ ಬಂದಿದೆ. ಬಿಜೆಪಿಯವರು ಈ ವ್ಯಾಕ್ಸಿನ್ ಕೊಟ್ಟ ಕಂಪೆನಿಯಿಂದಲೂ ಲಂಚ ಹೊಡೆದಿದ್ದಾರೆ ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಕನ್ನಡದ ಮುಂಡಗೋಡದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದಂತ ಅವರು, ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಮೋದಿ ಫೋಟೊ ಇರುವ ಪ್ರಮಾಣ ಪತ್ರ ಕೊಟ್ಟರು. ಸತ್ತವರ ಸರ್ಟಿಫಿಕೆಟ್ಗೆ ಏಕೆ ಮೋದಿ ಫೋಟೋ ಹಾಕಿಲಿಲ್ಲ. ಜನಕ್ಕೆ ಏನೂ ಸಹಾಯ ಮಾಡದೆ ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಮಂಗಮಾಯ ಆಗುತ್ತೆ ಎಂದರು, ಏನೂ ಆಗಲಿಲ್ಲ. ಕೋರೋನಾ ಸಮಯದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಕೊಟ್ಟಿದ್ದೇನೆ ಎಂದು ಹೇಳಿತು. ಆ ಹಣ ಯಾರಿಗಾದರೂ ಬಂದಿದೆಯೇ? ಎಂದು ಪ್ರಶ್ನಿಸಿದರು.
ನಮ್ಮ ಕರಾವಳಿಯ ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್ ಅನ್ನು ಬೇರೆ ಬ್ಯಾಂಕ್ ಗಳ ಜೊತೆ ವಿಲೀನ ಮಾಡಿ ಒಂದೂ ಬ್ಯಾಂಕ್ ಇಲ್ಲದಂತೆ ಮಾಡಿದ್ದು ಬಿಜೆಪಿ ಸಾಧನೆ. ಕೋರೋನಾ ಸಮಯದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಜದ ಎಲ್ಲಾ ವರ್ಗದ ಕಾರ್ಮಿಕರಿಗೆ 10 ಸಾವಿರ ಸಹಾಯಧನ ನೀಡಿ ಎಂದು ಮನವಿ ಮಾಡಿದರು ಕೊಡಲಿಲ್ಲ. ಆನಂತರ ಒಂದಷ್ಟು ಜನಕ್ಕೆ 5 ಸಾವಿರ ಕೊಟ್ಟು ಕೈತೊಳೆದುಕೊಂಡರು ಎಂದು ಗುಡುಗಿದರು.
ಕಾರ್ಮಿಕರು ಸ್ವಂತ ಊರಿಗೆ ಹೋಗುವಾಗ ಬಸ್ ಟಿಕೆಟ್ ದರ ಮೂರು ಪಟ್ಟು ಹೆಚ್ಚಳ ಮಾಡಿದ್ದರು ಯಡಿಯೂರಪ್ಪ. ಈ ರಾಜ್ಯ ಕಟ್ಟಲು ಕಾರ್ಮಿಕಕರು ಬೇರೆ ಊರುಗಳಿಂದ ಬಂದಿದ್ದಾರೆ. ಅವರ ಬಳಿ ಒಂದು ರೂಪಾಯಿ ತೆಗೆದುಕೊಳ್ಳ ಬೇಡಿ ಎಂದು ಹೋರಾಟ ಮಾಡಿದೆವು. ನಾನು ಪಕ್ಷದ ಕಡೆಯಿಂದ 1 ಕೋಟಿ ಮೊತ್ತದ ಚೆಕ್ ನೀಡಿ ಉಚಿತ ಬಸ್ ವ್ಯವಸ್ಥೆ ಮಾಡಿ ಎಂದೆ. ನನ್ನ ಬಳಿ ಚೆಕ್ ತೆಗೆದುಕೊಳ್ಳಲಿಲ್ಲ. ಆದರೆ ನಮ್ಮ ಹೋರಾಟಕ್ಕೆ ಮಣಿದು ಉಚಿತ ಬಸ್ ಮಾಡಿದರು ಎಂದರು.
ಬಿಜೆಪಿಯವರು ಈ ರೀತಿಯ ಒಂದೇ ಒಂದು ಮಾನವೀಯತೆಯ ಕೆಲಸ ಮಾಡಿಲ್ಲ. ಡಬಲ್ ಎಂಜಿನ್ ಸರ್ಕಾರ ಎಂದರು ಆದರೇ ಏನೂ ಮಾಡದ ಅವರನ್ನು ನಮ್ಮ ರಾಜ್ಯದ ಜನ ಮನೆಯಲ್ಲಿ ಕೂರಿಸಿ, ನಮಗೆ 136 ಸ್ಥಾನ ಕೊಟ್ಟಿದ್ದಾರೆ ಎಂದು ಹೇಳಿದರು.
ನಾವು ಗೃಹಲಕ್ಷ್ಮಿ ಮೂಲಕ ವರ್ಷಕ್ಕೆ 24 ಸಾವಿರ ಕೊಡುತ್ತಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 1 ಲಕ್ಷ ಕೊಡುತ್ತೇವೆ. ಯುವಕರಿಗೆ 1 ಲಕ್ಷ, ರೈತರ ಸಾಲ ಮನ್ನಾ, 25 ಲಕ್ಷ ಆರೋಗ್ಯ ವಿಮೆ ಕೊಡುತ್ತೇವೆ. ಕಾಂಗ್ರೆಸ್ ಪಕ್ಷ ಕರ್ನಾಟಕ ಮಾತ್ರವಲ್ಲ ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇಡೀ ದೇಶದಲ್ಲಿ ಇಂಡಿಯಾ ಒಕ್ಕೂಟ ಗೆಲ್ಲಲಿದೆ. ಕರ್ನಾಟಕದಿಂದ 6 ಜನ ಮಹಿಳೆಯರಿಗೆ ಟಿಕೆಟ್ ಕೊಟ್ಟಿದ್ಧೇವೆ. ಕರ್ನಾಟಕದ ದನಿಯಾಗಿ ಇವರೆಲ್ಲಾ ಕೆಲಸ ಮಾಡಲಿದ್ದಾರೆ ಎಂದರು.
ಬಿಜೆಪಿಯಿಂದ ದೇಶದ ಯಾರಿಗೂ ಒಳ್ಳೆಯದಾಗಿಲ್ಲ. ರೈತರ ಆದಾಯ ಡಬಲ್ ಆಗಿಲ್ಲ, ಉದ್ಯೋಗವಿಲ್ಲ. ಬಿಜೆಪಿಯವರು ಮನೆಯ ಬಳಿ ಬಂದರೆ ಕೇಳಬೇಕು ಏನಾದರೂ ಅನುಕೂಲ ಆಗಿದೆಯೇ? ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನಕ್ಕೆ ಒಳ್ಳೆಯದಾಗಬೇಕು. ಅನುಕೂಲವಾಗಬೇಕು, ಕಷ್ಟ ಕ್ಕೆ ನೆರವಾಗಬೇಕು, ಊರಿಗೆ ಅಥವಾ ವೈಯಕ್ತಿಕವಾಗಿ ಒಳ್ಳೆಯದಾಗಬೇಕು ಆದರೆ ಬಿಜೆಪಿಯಿಂದ ಏನೂ ಒಳ್ಳೆಯದಾಗಿಲ್ಲ.
ಬಿಜೆಪಿಯವರು ಹೇಳಿದ್ರು ಕಾಂಗ್ರೆಸ್ ಅವರು ಕೊಳ್ಳೆ ಹೊಡೆದಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ವಿದೇಶದಲ್ಲಿ ಇರುವ ಎಲ್ಲಾ ಕಪ್ಪುಹಣ ತಂದು ಜನ್ ಧನ್ ಖಾತೆ ತೆರೆಸಿ ಜನರ ಖಾತೆಗೆ ಹಾಕುತ್ತೇವೆ ಎಂದು ಹೇಳಿದರು. ಹಣ ಬಂದಿದೆಯೇ? ಜನರ ಈ ಎಲ್ಲಾ ಕಷ್ಟಗಳನ್ನು ನೋಡಿದ ನಾವು ಪ್ರಜಾಧ್ವನಿ, ಮೇಕೆದಾಟು ಯಾತ್ರೆ, ಭಾರತ್ ಜೋಡೋ ಯಾತ್ರೆ ಮಾಡಿ ಈ ಕಷ್ಟಗಳ ಪರಿಹಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು.
ಬೆಲೆಏರಿಕೆಯಿಂದ ನಮ್ಮ ಹೆಣ್ಣು ಮಕ್ಕಳು ಕಷ್ಟಪಡುತ್ತಿದ್ದರು ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. 200 ಯುನಿಟ್ ವಿದ್ಯುತ್ ಉಚಿತ, 2 ಸಾವಿರ ಖಚಿತ ಎಲ್ಲರ ಮನೆಗೂ ತಲುಪಿದೆಯಲ್ಲವೇ. ಜನರಿಗೆ ಉತ್ತಮ ಯೋಜನೆ ನೀಡಿದ ಸಂತೃಪಿ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಇದೆ. ಉಳುವವನೆ ಭೂಮಿಯ ಒಡೆಯ ಯೋಜನೆಯನ್ನು ಇಂದಿರಾ ಗಾಂಧಿ, ದೇವರಾಜ ಅರಸು ಅವರು ಜಾರಿಗೆ ತಂದರು. ಮನಮೋಹನ್ ಸಿಂಗ್ ಅವರು ಅರಣ್ಯ ಕಾಯ್ದೆ ಜಾರಿಗೆ ತಂದು ಆದಿವಾಸಿಗಳಿಗೆ ಜಮೀನು ನೀಡುವ ಯೋಜನೆ ಜಾರಿಗೆ ತಂದೆವು. 2013 ರ ನಮ್ಮ ಸರ್ಕಾರದ ಸಮಯದಲ್ಲಿ ಯಾವುದೇ ಕಾರಣಕ್ಕೂ ಅರಣ್ಯಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಬಾರದು ಎನ್ನುವ ತೀರ್ಮಾನ ತೆಗೆದುಕೊಂಡೆವು. ಅರಣ್ಯವಾಸಿಗಳಿಗೆ ಪಟ್ಟಾ ಕೊಡುವ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಲಿದೆ. ಎಲ್ಲಿ ಶ್ರಮ ಇದೆ ಅಲ್ಲಿ ಫಲವಿದೆ.
ದೇಶದಲ್ಲಿ ನೂರಾರು ಅಣೆಕಟ್ಟುಗಳಿವೆ ಬಿಜೆಪಿಯವರು ಒಂದೇ ಒಂದು ಅಣೆಕಟ್ಟುಗಳನ್ನು ಕಟ್ಟಿದ್ದಾರೆಯೇ? ವಿದ್ಯುತ್ ಉತ್ಪಾದನಾ ಕೇಂದ್ರಗಳು, ಸೋಲಾರ್ ಉತ್ಪಾದನಾ ಕೇಂದ್ರ ನಿರ್ಮಾಣ ಮಾಡಿದ್ದು ಕಾಂಗ್ರೆಸ್. ರಾಜ್ಯದಲ್ಲಿ ಮೊದಲು ಉಚಿತ ವಿದ್ಯುತ್ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ.
ಆಹಾರ ಭದ್ರತಾ ಕಾಯ್ದೆ, ಉಚಿತವಾಗಿ ಸಿದ್ದರಾಮಯ್ಯ ಅವರು ಅಕ್ಕಿ ಕೊಡುವ ಯೋಜನೆ ತಂದರು. ಹೆಣ್ಣುಮಕ್ಕಳಿಗೆ ಪದವಿಯ ತನಕ ಉಚಿತ ಶಿಕ್ಷಣ ನೀಡಬೇಕು ಎಂದು ಯೋಜನೆ ತಂದಿದ್ದು ಕಾಂಗ್ರೆಸ್ ಸರ್ಕಾರ. ನರೇಗಾ ಯೋಜನೆ ತಂದು ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ ಮಾಡಿದೆವು, ಬಿಜೆಪಿಯವರು ಬರಗಾಲದಲ್ಲಿ ನರೇಗಾ ಕೆಲಸ ಹೆಚ್ಚಳ ಮಾಡಿ ಎಂದರೂ ಮಾಡಲಿಲ್ಲ.
ಬರಗಾಲ ಬಂದಿದೆ ಎಂದು ಗೊತ್ತಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಹಣ ಕೊಡಲಿಲ್ಲ. ಡಿ.ಕೆ.ಸುರೇಶ್ ಏಕಾಂಗಿಯಾಗಿ ರಾಜ್ಯದ ಪರ ಹೋರಾಟ ಮಾಡಿದರು. ಬಿಜೆಪಿಯವರು ಒಬ್ಬರೂ ಬಾಯಿ ಬಿಡಲಿಲ್ಲ. ನಾವೆಲ್ಲಾ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದೆವು, ಸುಪ್ರೀಂಕೋರ್ಟಿಗೆ ಹೋದೆವು. ಅಲ್ಲಿ ಛೀಮಾರಿ ಹಾಕಿಸಿಕೊಂಡ ನಂತರ ಮೂರುವರೆ ಸಾವಿರ ಕೋಟಿ ಮಾತ್ರ ಕೊಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ಬರದಿಂದ 50 ಸಾವಿರ ಕೋಟಿ ನಷ್ಟ ಉಂಟಾಗಿದೆ.
ಈ ದೇಶದ ಬಡವರಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಒಳ್ಳೆಯದಾಗಿದೆ. ಮಾತೆತ್ತಿದ್ದರೆ ಬಿಜೆಪಿಯವರು ಹಿಂದೂ ಎನ್ನುತ್ತಾರೆ. ನಾನು, ಸಿದ್ದರಾಮಯ್ಯ, ದೇಶಪಾಂಡೆ ಅವರುಗಳು ಹಿಂದೂಗಳಲ್ಲವೇ? ಬಂಗಾರಪ್ಪ ಅವರ ಸಮಯದಲ್ಲಿ ಆರಾಧನಾ ಯೋಜನೆ ತಂದು ಸಣ್ಣ, ಸಣ್ಣ ದೇವಸ್ಥಾನಗಳಿಗೆ ಹಣ ಕೊಡುವ ಯೋಜನೆ ತಂದರು. ಕಾಳಮ್ಮ, ಮಂಚಮ್ಮ, ಆಂಜನೇಯ, ಬಸವಣ್ಣನ ದೇವಸ್ಥಾನಗಳಿಗೆ ಹಣ ಕೊಡುವ ಯೋಜನೆ ತಂದಿದ್ದು ನಾವು. ಧರ್ಮದಲ್ಲಿ ರಾಜಕಾರಣ ಇರಬಾರದು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ನಮಗೆ ಭಗವದ್ಗೀತೆ, ಬೈಬಲ್, ಕುರಾನ್. ನಾವು ಸಂವಿಧಾನ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ‘CBI’ ಗೆ ವಹಿಸಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗ್ರಹ