ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದು, ರಾಜ್ಯದ 28 ಜಿಲ್ಲೆಗಳಲ್ಲಿ ದಾಖಲೆಯ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಿದೆ. ಅದರಲ್ಲಿ ಬಳ್ಳಾರಿ ಸೇರಿದಂತೆ ಆರು ಜಿಲ್ಲೆಗಳಲ್ಲಿ 45 ಡಿಗ್ರಿ ದಾಖಲಾಗುವ ಮೂಲಕ, ಅತಿಹೆಚ್ಚು ತಾಪಾಮಾನ ದಾಖಲಾಗಿದೆ.
ಈ ನಡುವೆ ಲಿಂಗಸುಗೂರು ಪಟ್ಟಣದ ಯುವಕರು ರಣಬಿಸಿಲಿನಲ್ಲಿ ಕಾವಲಿ ಇಟ್ಟು ಆಮ್ಮೆಟ್ ಹಾಕಿದ್ದಾರೆ. ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೋನಿಯಲ್ಲಿ ಯುವಕರು ಸೇರಿ ಮನೆಯ ಮುಂದೆ ಬಿರುಬಿಸಿಲಿನಲ್ಲಿ ಕಾವಲಿಯನ್ನು ಇಟ್ಟು ಅದು ಬಿಸಿಲಿನಿಂದ ಕಾಯುತ್ತಿದ್ದಂತೆಯೇ ಮೊಟ್ಟೆಯನ್ನು ಒಡೆದು ಹಾಕಿದಾಗ ಕೆಲವೇ ನಿಮಿಷದಲ್ಲಿ ಅದು ಆಮ್ಮೆಟ್ ಆಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ತೀವ್ರ ಶಾಖದ ಅಲೆ ಕಾಣಿಸಿಕೊಂಡಿದೆ. ಹೀಗಾಗಿ ಜನರು ಮೇ.5ರವರೆಗೆ ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ ಎಚ್ಚರಿಕೆ ನೀಡಿದೆ.
ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗೆ ಗುರುವಾರ ‘ರೆಡ್ ಅಲರ್ಟ್’ ಘೋಷಿಸಿದ್ದು, ಈ ಜಿಲ್ಲೆಗಳಲ್ಲಿ ತೀವ್ರ ಶಾಖದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮುನ್ಸೂಚನೆಯನ್ನು ನೀಡಲಾಗಿದೆ. ಜನರು ಬಿಸಿಯ ಶಾಖದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.