ಚಿಂಚೋಳಿ : ಕೋಮುವಾದಿ ಬಿ.ಜೆ.ಪಿ. ಸಮಾಜ ಒಡೆದು, ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದು, ದೇಶದ ಉಳಿವಿಗಾಗಿ ಎಲ್ಲ ಜಾತ್ಯತೀತ ಶಕ್ತಿಗಳೂ ಒಗ್ಗೂಡಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿಯಲ್ಲಿಂದು ಶೋಷಿತ ವರ್ಗಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಶೋಷಿತರ ನಡುವೆಯೇ ಎಡ- ಬಲ ಎಂಬಿತ್ಯಾದಿ ಭೇದ ಭಾವವನ್ನು ಬಿಜೆಪಿ ಹುಟ್ಟುಹಾಕುತ್ತಿದೆ. ಬಿಜೆಪಿಗೆ ಮೊದಲ ಹಂತದ ಚುನಾವಣೆ ಬಳಿಕ ಈ ಬಾರಿ ಸೋಲು ನಿಶ್ಚಿತ ಎಂದು ಅರಿವಾಗಿದ್ದು, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಜಾತಿ, ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಮಾತನಾಡುವಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂದರು.
ಬಿಜೆಪಿ 2004ರ ಚುನಾವಣೆಗೆ ಮುನ್ನ ಜನರಿಗೆ ಸ್ವರ್ಗವನ್ನೇ ಧರೆಗಿಳಿಸುವಂತೆ ಆಶ್ವಾಸನೆ ನೀಡಿತ್ತು. ಅಚ್ಛೇದಿನವೂ ಬರಲಿಲ್ಲ. ರೈತರ ಆದಾಯ ದುಪ್ಪಟ್ಟಾಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಆಗಲಿಲ್ಲ. ಬದಲಾಗಿ ಬಡವರ ಬದುಕು ದುರ್ಬರವಾಗುತ್ತಿದೆ, ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ, ರೈತರ ವೆಚ್ಚ ಅಧಿಕವಾಗಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಎಂದರು.
ಬಿಜೆಪಿ ಸರ್ಕಾರದ ಹಿಡನ್ ಅಜೆಂಡಾ ಸಂವಿಧಾನ ಬದಲಾವಣೆ ಮಾಡುವುದಾಗಿದೆ. ಡಾ. ಭೀಮರಾವ್ ಅಂಬೇಡ್ಕರ್ ಅವರು ಕೊಟ್ಟ ಈ ಸಂವಿಧಾನವನ್ನು ಸಂರಕ್ಷಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಕಾಂಗ್ರೆಸ್ ಪಕ್ಷ ಶೋಷಿತರಿಗೆ, ದಮನಿತರಿಗೆ, ವಂಚಿತರಿಗೆ ಸಮಾನ ಅವಕಾಶ ನೀಡಿದೆ ಎಂದರು.
ಯುಪಿಎ ಕಾಲದಲ್ಲಿ ಪ್ರಧಾನಿ ಡಾ. ಮನಮೋಹನ ಸಿಂಗ್ ರೈತರ ಸಾಲ ಮನ್ನಾ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ, ಟೀಕಿಸಿದ ಬಿಜೆಪಿ ಕಳೆದ 10 ವರ್ಷದಲ್ಲಿ ಉದ್ಯಮಪತಿಗಳ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ, ಬ್ಯಾಂಕ್ ಗಳನ್ನು ದಿವಾಳಿ ಎಬ್ಬಿಸಿದೆ. ಬಡವರ ಬೆವರಿನ ಹಣವನ್ನು ಕಿತ್ತು, ದುರ್ಬಲರ ಕಿಸೆಗೆ ಕೈಹಾಕಿ, ಕೆಲವೇ ಕೆಲವು ಆಯ್ದ ಶ್ರೀಮಂತರ ಜೋಬು ತುಂಬಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ದುಡಿಯುವ ಕೈಗೆ ಉದ್ಯೋಗ ನೀಡಲು ಹಲವು ಸಾರ್ವಜನಿಕ ವಲಯದ ಕೈಗಾರಿಕೆ ಸ್ಥಾಪಿಸಿತ್ತು. ನವರತ್ನ ಕಂಪನಿಗಳನ್ನು ಆರಂಭಿಸಿತ್ತು. ಆದರೆ ಬಿಜೆಪಿ ಸರ್ಕಾರ ಈ ಎಲ್ಲ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿಯ ಅಡಿಯಲ್ಲಿ ಉದ್ಯೋಗ ದೊರಕದಂತೆ ಮಾಡಿ ದಲಿತರಿಗೆ ಅನ್ಯಾಯ ಮಾಡಿದೆ. ಬಿಎಸ್.ಎನ್.ಎಲ್. ಮುಚ್ಚುವ ಹಂತದಲ್ಲಿದೆ ಎಂದರು.
ಸಂಸದರ ಕೊಡುಗೆ ಶೂನ್ಯ
ಹಾಲಿ ಸಂಸತ್ ಸದಸ್ಯರಾಗಿರುವ ಭಗವಂತ ಖೂಬಾ ಕೇಂದ್ರದಲ್ಲಿ ಸಚಿವರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಶೂನ್ಯ. ಕಳೆದ 10 ವರ್ಷದಿಂದ ಜನರ ನೋವು, ನಲಿವಿಗೆ ಸ್ಪಂದಿಸಿಲ್ಲ. ಕೋವಿಡ್ ಕಾಲದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸದೆ, ಧ್ಯಾನ ಮಾಡುತ್ತಾ ಮನೆಯಲ್ಲಿ ಕುಳಿತಿದ್ದರು ಎಂದು ಈಶ್ವರ ಖಂಡ್ರೆ ಆರೋಪಿಸಿದರು.
ಲಕ್ಷ ಕೋಟಿ ಅನುದಾನ ತಂದಿದ್ದಾಗಿ ಕೊಚ್ಚಿಕೊಳ್ಳುವ ಭಗವಂತ ಖೂಬಾ ಇದ್ದ ವಿಮಾನ ನಿಲ್ದಾಣ ಬಂದ್ ಮಾಡಿಸಿದರು, ಸಿಪೆಟ್ ಮಾಡುತ್ತೇನೆಂದು ಭೂಮಿ ಪೂಜೆ ಮಾಡಿದ್ದು ಬಿಟ್ಟರೆ ಪ್ರಗತಿಯೇ ಆಗಲಿಲ್ಲ. ಎಫ್.ಎಂ. ರೇಡಿಯೋ ಉಲಿಯಲೇ ಇಲ್ಲ ಎಂದು ಈಶ್ವರ ಖಂಡ್ರೆ ಲೇವಡಿ ಮಾಡಿದರು.
ತಮ್ಮ ಪುತ್ರ ಸಾಗರ್ ಈಶ್ವರ್ ಖಂಡ್ರೆಗೆ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಈ ಹಿಂದೆ ಪೌರಾಡಳಿತ ಸಚಿವರಾಗಿದ್ದಾಗ ಈಶ್ವರ ಖಂಡ್ರೆ ಅವರು ಚಿಂಚೋಳಿಯ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದಾರೆ ಎಂದು ಸ್ಮರಿಸಿದರು. ಸಂಸದ ಖೋಬಾ ಬೆಂಚು ಹಾಕಿಸಿದ್ದು ಬಿಟ್ಟರೆ ಬೇರೆ ಸಾಧನೆ ಮಾಡಿಲ್ಲ ಎಂದರು.
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸುಭಾಷ್ ರಾಠೋಡ್ ಮಾತನಾಡಿ, ಬಿಜೆಪಿ ಸೋಲಿನ ಭೀತಿಯಿಂದ ಸಾಮಾಜಿಕ ತಾಣದಲ್ಲಿ ಕಾಂಗ್ರೆಸ್ ಪಕ್ಷ ಡಾ. ಅಂಬೇಡ್ಕರ್ ಅವರಿಗೆ ಮತ್ತು ಬಾಬು ಜಗಜೀವನರಾಮ್ ಅವರಿಗೆ ಅನ್ಯಾಯ ಮಾಡಿದೆ ಎಂದು ಅಪಪ್ರಚಾರ ಮಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದಿದ್ದರೂ ಡಾ.ಅಂಬೇಡ್ಜರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿದ್ದು ಜವಾಹರಲಾಲ್ ನೆಹರೂ ಅವರು, ಅವರ ಕ್ಷೇತ್ರ ಪಾಕಿಸ್ತಾನಕ್ಕೆ ಸೇರಿದಾಗ, ಮುಂಬೈನಲ್ಲಿ ಕಾಂಗ್ರೆಸ್ ಪಕ್ಷದ ಸಂಸದರ ರಾಜೀನಾಮೆ ಕೊಡಿಸಿ, ಅಲ್ಲಿ ಅಂಬೇಡ್ಕರ್ ಅವರನ್ನು ನಿಲ್ಲಿಸಿ ಗೆಲ್ಲಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ಬಾಬು ಜಗಜೀವನ ರಾಮ್ ಅವರು 4 ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಉನ್ನತ ಹುದ್ದೆ ಅಲಂಕರಿಸಿದರು. ಇವರಿಗೆ ಕಾಂಗ್ರೆಸ್ ಮನ್ನಣೆ, ಮಾನ್ಯತೆ, ಆದ್ಯತೆ ನೀಡಿತೇ ಹೊರತು ಅನ್ಯಾಯ ಮಾಡಲಿಲ್ಲ. ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕಾಯಕ ಎಂದರು.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡಲು 371 ಜೆ ಸಾಂವಿಧಾನಿಕ ತಿದ್ದುಪಡಿಗೆ ಕಾರಣಕರ್ತರಾದ ಡಾ. ಮಲ್ಲಿಕಾರ್ಜುನ ಖರ್ಗೆ ನಮ್ಮ ಪಾಲಿನ ಅಂಬೇಡ್ಕರ್ ಎಂದು ಗುಣಗಾನ ಮಾಡಿದರು.
ಪ್ರಚಾರ ಸಭೆಯಲ್ಲಿ ಬಾಬುರಾವ್ ಪಾಟೀಲ್, ಬಸವರಾಜ್ ಮೇತ್ರಿ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜ್ವಲ್ ಪ್ರಕರಣ; ಪ್ರಧಾನಿ ಮೋದಿ, ದೇವೇಗೌಡರ ಕುಟುಂಬವೇ ನೇರ ಹೊಣೆ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ