ಬೆಂಗಳೂರು : 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿ (Academic Year Calender) ಸಿದ್ದಪಡಿಸುವ ಸಂಬಂಧ ದಿನಾಂಕ:03.05.2024ರಂದು ಆಯೋಜಿಸಿರುವ ಪೂರ್ವ ಭಾವಿ ಸಭೆಗೆ ಹಾಜರಾಗುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.
2024-25ನೇ ಸಾಲಿಗೆ ರಾಜ್ಯ ಪಠ್ಯ ಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೈಕ್ಷಣಿಕ ಆಡಳಿತಾತ್ಮಕ, ಮತ್ತು ಅಭಿವೃದ್ಧಿ ಪೂರಕ ಚಟುಚಟಿಕೆಗಳು/ಕಾರ್ಯಕ್ರಮಗಳನ್ನು ಶೈಕ್ಷಣಿಕ ವರ್ಷದ ರಜೆ ದಿನಗಳೂ ಸೇರಿದಂತೆ ಸಮಗ್ರವಾಗಿ ಮಾಹೆವಾರು ನಿಗಧಿಪಡಿಸಿ ಪೂರ್ವಭಾವಿಯಾಗಿ ಅನುಷ್ಠಾನಗೊಳಿಸಬೇಕಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಏಕರೂಪತೆ ಇರಲು ಶೈಕ್ಷಣಿಕ ಮಾರ್ಗಸೂಚಿ/ಕ್ರಿಯಾ ಯೋಜನೆಯನ್ನು ಅಳವಡಿಸಿಕೊಳ್ಳಲು ಸಹಾಯವಾಗುವಂತೆ ಪ್ರತಿ ವರ್ಷ ಈ ಕಛೇರಿಯಿಂದ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಬಿಡುಗಡೆಗೊಳಿಸಲಾಗುತ್ತಿರುವುದು ಸರಿಯಷ್ಟೆ. ಅದರಂತೆ ಸದರಿ ಶಾಲೆಗಳಲ್ಲಿ ಆಯಾ ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವೃಂದದವರು ಸದರಿ ಮಾರ್ಗಸೂಚಿಯಂತೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸ್ಥಳೀಯವಾಗಿ ವಾರ್ಷಿಕ ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸುತ್ತಾರೆ.
ಅದೇ ರೀತಿ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರುಗಳು(ಆಡಳಿತ) ಮತ್ತು ಉಪನಿರ್ದೇಶಕರುಗಳು (ಅಭಿವೃದ್ಧಿ) ರವರು ತಮ್ಮ ವ್ಯಾಪ್ತಿಯಲ್ಲಿನ ವಿಶೇಷ ಕಾರ್ಯಕ್ರಮಗಳು ಸೇರಿದಂತೆ ಉತ್ತಮ ಪೂರ್ವತಯಾರಿ ಮಾಡಿಕೊಂಡು ವಾರ್ಷಿಕ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ.
ಆದ್ದರಿಂದ ಸದರಿ ಶೈಕ್ಷಣಿಕ ವಾರ್ಷಿಕ ಮಾರ್ಗಸೂಚಿಯು ಸಂಕ್ಷಿಪ್ತವಾಗಿದ್ದು, ಇದರಲ್ಲಿ ಮಾಹೆವಾರು ವಾರ್ಷಿಕವಾಗಿ ಅಳವಡಿಸಬೇಕಾದ ಚಟುವಟಿಕೆಗಳ ಮುಖ್ಯಾಂಶಗಳ ಕುರಿತು ಅನುಬಂಧ-1ರಲ್ಲಿ ನೀಡಿದೆ. ಇದರಂತೆ ರಾಜ್ಯದ ಎಲ್ಲಾ ವಿಭಾಗೀಯ ನಿರ್ದೇಶಕರುಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿಯ ಕ್ಷೇತ್ರವಾರು ಕ್ರಿಯಾಯೋಜನೆಯನ್ನು ರೂಪಿಸಿಕೊಂಡು ಅದರಲ್ಲಿನ ಮುಖ್ಯಾಂಶಗಳನ್ನು ಸದರಿ ಕ್ರಿಯಾ ಸೂಚಿಯಲ್ಲಿ ಅಳವಡಿಸಲು ವಿವರವಾದ ಸಂಕ್ಷಿಪ್ತ ಕ್ರಿಯಾ ಯೋಜನೆಯ ಮುಖ್ಯಾಂಶಗಳನ್ನು ತಮ್ಮ ಕಾರ್ಯವ್ಯಾಪ್ತಿವಾರು ಪ್ರತ್ಯೇಕವಾಗಿ ನೀಡಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ದಿನಾಂಕ:03.05.2024ರಂದು ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ಈ ಕಛೇರಿಯಲ್ಲಿ ಸಭೆ ಕರೆಯಲಾಗಿದ್ದು, ಸದರಿ ಸಭೆಗೆ ತಾವುಗಳು ಕಡ್ಡಾಯವಾಗಿ ಭಾಗವಹಿಸುವುದರೊಂದಿಗೆ ಸದರಿ ಮಾರ್ಗಸೂಚಿಯನ್ನು ರೂಪಿಸಲು ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕರಿಸುವುದರೊಂದಿಗೆ ಸಲಹೆಗಳನ್ನು ಮತ್ತು ತಮ್ಮ ವ್ಯಾಪ್ತಿಯಡಿ 2024-25ನೇ ಶೈಕ್ಷಣಿಕ ಸಾಲಿನಲ್ಲಿನ ಕಾರ್ಯ ಯೋಜನೆಯ ಪಕ್ಷಿ ನೋಟದ ಬಗ್ಗೆ ತಿಳಿಸುವಂತೆ ಮತ್ತು ಮಾರ್ಗಸೂಚಿಯಲ್ಲಿ ಅಳವಡಿಸಲು ಸಹಾಯವಾಗುವಂತೆ ಲಿಖಿತ ಪ್ರತಿ ನೀಡುವಂತೆ ಕೋರಿದೆ.
ವಿಶೇಷ ಸೂಚನೆ: ಸಭೆಗೆ ಬೌತಿಕವಾಗಿ ಹಾಜರಾಗಲು ಸಾಧ್ಯವಾಗದಿರುವವರು Zoom ಮೀಟ್ ಮುಖಾಂತರ ಹಾಜರಾಗುವುದು. ಆದರೆ ತಮ್ಮ ಕಾರ್ಯ ವ್ಯಾಪ್ತಿಯ ಮಾಹಿತಿಯನ್ನು ಕಡ್ಡಾಯವಾಗಿ ದಿನಾಂಕ:30.04.2024ರೊಳಗೆ ಈ ಕಛೇರಿಯ ಇ ಮೇಲ್ ವಿಳಾಸ : primarydpi@gmail.com ಗೆ ತಪ್ಪದೆ ಇ-ಮೇಲ್ ಮುಖಾಂತರ ಸಲ್ಲಿಸುವುದು. Zoom ಮೀಟ್ ಲಿಂಕ್ ತಿಳಿಸಲಾಗುವುದು. ” ಮಾನ್ಯ ಆಯುಕ್ತರ ಆದೇಶದ ಮೇರೆಗೆ”