ನವದೆಹಲಿ: ಮುಸ್ಲಿಮರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳು ಮತ್ತು ‘ಸಂಪತ್ತಿನ ಮರುಹಂಚಿಕೆ’ ಹೇಳಿಕೆಗಳಿಂದ ವಿವಾದವಾದ ರಾಜಕೀಯ ಕೆಸರೆರಚಾಟಕ್ಕೆ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಭಾನುವಾರ ಧುಮುಕಿದ್ದಾರೆ.
ಭಾನುವಾರ ಹೈದರಾಬಾದ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಓವೈಸಿ, “ಮುಸ್ಲಿಮರು ಕಾಂಡೋಮ್ಗಳನ್ನು ಹೆಚ್ಚು ಬಳಸುತ್ತಾರೆ” ಎಂದು ಘೋಷಿಸುವ ಮೂಲಕ ಪ್ರಧಾನಿಯವರ “ಹೆಚ್ಚು ಮಕ್ಕಳನ್ನು ಹೊಂದಿರುವವರು” ಹೇಳಿಕೆಗೆ ತಿರುಗೇಟು ನೀಡಿದರು ಮತ್ತು ಆಡಳಿತ ಪಕ್ಷದ ‘ಮೋದಿ ಕಿ ಗ್ಯಾರಂಟಿ’ ಟ್ಯಾಗ್ಲೈನ್ ಅನ್ನು ಲೇವಡಿ ಮಾಡಿದರು.
“ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂಬ ಭಯವನ್ನು ನೀವು ಏಕೆ ಸೃಷ್ಟಿಸುತ್ತಿದ್ದೀರಿ? ಮೋದಿ ಸರ್ಕಾರದ ಅಂಕಿಅಂಶಗಳ ಪ್ರಕಾರ, ಮುಸ್ಲಿಮರಲ್ಲಿ ಜನಸಂಖ್ಯಾ ಬೆಳವಣಿಗೆ ಮತ್ತು ಫಲವತ್ತತೆ ಕಡಿಮೆಯಾಗಿದೆ. ಮುಸ್ಲಿಮರು ಕಾಂಡೋಮ್ ಅನ್ನು ಹೆಚ್ಚು ಬಳಸುತ್ತಾರೆ, ಮತ್ತು ಇದನ್ನು ಹೇಳಲು ನನಗೆ ಯಾವುದೇ ನಾಚಿಕೆಯಿಲ್ಲ” ಎಂದು ಓವೈಸಿ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಮುಸ್ಲಿಮರು ಬಹುಸಂಖ್ಯಾತ ಸಮುದಾಯವಾಗುತ್ತಾರೆ ಎಂಬ ಭಯವನ್ನು ನರೇಂದ್ರ ಮೋದಿ ಹಿಂದೂಗಳಲ್ಲಿ ಮೂಡಿಸುತ್ತಿದ್ದಾರೆ. ನೀವು ಎಷ್ಟು ದಿನ ಮುಸ್ಲಿಮರ ಬಗ್ಗೆ ಭಯವನ್ನು ಸೃಷ್ಟಿಸುತ್ತೀರಿ? ಎಂದು ಓವೈಸಿ ಪ್ರಶ್ನಿಸಿದರು.
2002ರಿಂದ ಪ್ರಧಾನಿ ಮೋದಿ ಅವರು ಮುಸ್ಲಿಂ-ದಲಿತ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಓವೈಸಿ ಆರೋಪಿಸಿದರು.
“ಪ್ರತಿಯೊಂದು ಪತ್ರಿಕೆಯೂ ಮೋದಿ ಕಿ ಗ್ಯಾರಂಟಿ ಎಂದು ಬರೆಯುತ್ತದೆ. ಮೋದಿ ಕಿ ಗ್ಯಾರಂಟಿ ಒಂದೇ ಒಂದು ಇದೆ, ಅದು ದಲಿತರು ಮತ್ತು ಮುಸ್ಲಿಮರ ಮೇಲಿನ ದ್ವೇಷ. ” ಎಂದರು.