ಬೆಂಗಳೂರು : ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಇನ್ಸ್ಟಾಗ್ರಾಮ್ ಪುಟದ ಮೂಲಕ ಬಾಹ್ಯಾಕಾಶ ಪ್ರೇಮಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು 2040 ರಲ್ಲಿ ಭಾರತವು ಚಂದ್ರನ ಮೇಲೆ ಇಳಿಯುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮವು ಯುವ ಪೀಳಿಗೆಯೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನವಾಗಿದೆ. ಖಾಸಗಿ ಕಂಪನಿಗಳು ಬಾಹ್ಯಾಕಾಶವನ್ನು ಹೆಚ್ಚು ಪ್ರವೇಶಿಸುವಂತೆ ಮಾಡುತ್ತವೆ ಮತ್ತು ಈ ಕ್ಷೇತ್ರದಲ್ಲಿ ಸಂಶೋಧನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತವೆ ಎಂದು ಸೋಮನಾಥ್ ಹೇಳಿದರು.
ಭಾರತದಲ್ಲಿ ಈಗಾಗಲೇ ಸ್ಕೈರೂಟ್ ಏರೋಸ್ಪೇಸ್ ಮತ್ತು ಅಗ್ನಿಕುಲ್ ಕಾಸ್ಮಾಸ್ ಎಂಬ ಎರಡು ಕಂಪನಿಗಳಿವೆ. ಭಾರತ ಈ ರೀತಿ ಮುಂದುವರಿಯುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ಈ ಕಂಪನಿಗಳು ಈಗಾಗಲೇ ರಾಕೆಟ್ ಗಳನ್ನು ಪರೀಕ್ಷಿಸಿವೆ ಎಂದು ತಿಳಿಸಿದ್ದಾರೆ.
ಚಂದ್ರಯಾನ -4 ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸೋಮನಾಥ್, “2040 ರಲ್ಲಿ ಭಾರತವು ಚಂದ್ರನ ಮೇಲೆ ಇಳಿಯುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಚಂದ್ರಯಾನ -4 ಈ ಉದ್ದೇಶದ ಮೊದಲ ಹೆಜ್ಜೆಯಾಗಿದೆ. ಚಂದ್ರನಿಗೆ ವಾಹನವನ್ನು ಕಳುಹಿಸುವುದು, ಮಾದರಿಗಳನ್ನು ಸಂಗ್ರಹಿಸಿ ಮತ್ತೆ ಭೂಮಿಗೆ ತರುವುದು ಈ ಮಿಷನ್ ನ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.