ಕಲಬುರಗಿ: ನರೇಂದ್ರ ಮೋದಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಅಪ್ರಸ್ತುತ ವಿಷಯಗಳನ್ನು ಹೇಳುವುದು, ಜನರ ಭಾವನೆಗಳನ್ನು ಕೆರಳಿಸುವುದು, ಧ್ರುವೀಕರಣ ಮಾಡುವ ಮೂಲಕ ಅವರ ಘನತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇದರಿಂದ ನಮಗೇನೂ ಹಾನಿಯಿಲ್ಲ. ಜನರು ಸುಳ್ಳ ಹೇಳಿದರೆ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದ್ದಾರೆ ಅಂಥ ಹೇಳಿದರು.
ಅವರು ಇಂದು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮೀಸಲಾತಿ ಮತ್ತು ಮಂಗಳಸೂತ್ರದ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇನ್ನೂ ಕ್ರಮ ಕೈಗೊಂಡಿಲ್ಲ. ಅವರಿಗೆ ನೋಟೀಸು ಕೊಟ್ಟಿದ್ದಾರೆ. ನಾವು ಕ್ರಮ ಕೈಗೊಳ್ಳುವ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ. ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ. ಬೇರೆ ವಿಚಾರದಲ್ಲಿ ಮೋದಿಯವರಿಗೂ ನೋಟೀಸು ನೀಡಿದ್ದಾರೆ ಎಂದು ತಿಳಿಸಿದರು.
ನಾವು ಸ್ಪಷ್ಟವಾಗಿ ಜನರಿಗೆ ನಾವು ಏನು ಮಾಡಿದ್ದೇವೆ ಎಂದು ಪ್ರಸ್ತಾಪ ಮಾಡಿದ್ದೇವೆ. ಕೇಂದ್ರ ಸರ್ಕಾರ ಏನು ಹೇಳಿದ್ದರು, ಏನು ಮಾಡಿದ್ದಾರೆ ಎಂಬುದನ್ನೆಲ್ಲ ಹೇಳಿದ್ದೇವೆ. ಜನರು ನೀಡುವ ತೀರ್ಪು ಅಂತಿಮ. ನಮ್ಮ ಐದು ಗ್ಯಾರಂಟಿಗಳು ಮತ್ತೆ ನುಡಿದಂತೆ ನಡೆದಿರುವುದು ಜನರ ಮೇಲೆ ಪರಿಣಾಮವಾಗಿದೆ. ಮತ್ತು ಕಾಂಗ್ರೆಸ್ ಬಗ್ಗೆ ವಿಶ್ವಾಸ, ನಂಬಿಕೆ ಬಂದಿದೆ ಎಂಬ ವಿಶ್ವಾಸ ನನ್ನದು ಎಂದು ತಿಳಿಸಿದರು.
ಜನ ತಮ್ಮ ವಿವೇಚನೆಯ ಮೇರೆಗೆ ತೀರ್ಪು ಕೊಡುತ್ತಾರೆ. ನಮ್ಮ ಮಾತುಗಳನ್ನೂ ಗಮನಕ್ಕೆ ತೆಗೆದುಕೊಳ್ಳುತ್ತಾರೆ, ಜನರನ್ನು ದಡ್ಡರೆಂದು ನಾವು ತಿಳಿದುಕೊಂಡರೆ, ನಾವೇ ದಡ್ಡರು. ಅವರು ಬುದ್ಧಿವಂತರು ಹಾಗೂ ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ಎಲ್ಲ ಕಾಲದಲ್ಲೂ ನೋಡಿ, ಜನರು ಬಹಳ ಬುದ್ಧಿವಂತಿಕೆಯಿಂದ ಮತ ಚಲಾಯಿಸಿದ್ದಾರೆ ಎಂದು ನುಡಿದರು.
ಅಭ್ಯರ್ಥಿಯ ಮೇಲೆ ಮತ್ತೊಬ್ಬ ಅಭ್ಯರ್ಥಿಯೇ ಪ್ರಭಾವ ಬೀರಿರಬಹುದು. ಅದಕ್ಕಾಗಿಯೇ ಪಕ್ಷದ ಅಭ್ಯರ್ಥಿ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕರ್ನಾಟಕದ ಬಗ್ಗೆ ಅವರಿಗೆ ಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ. ಇಲ್ಲಿನ ವಿಚಾರಗಳನ್ನು ತಿಳಿದುಕೊಂಡಿದ್ದಾರೋ ಇಲ್ಲವೋ ಅನ್ನೋದು ಕೂಡ ಗೊತ್ತಿಲ್ಲ. ನನಗೂ ಡಿ.ಕೆ. ಶಿವಕುಮಾರ್ ಅವರಿಗೂ ಶೀತಲ ಸಮರ ಇಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಅಸ್ಸಾಂ ಮುಖ್ಯಮಂತ್ರಿ. ಈ ದೇಶದ ಪ್ರಧಾನ ಮಂತ್ರಿಯೂ ಅಲ್ಲ, ಕರ್ನಾಟಕದ ವಿರೋಧ ಪಕ್ಷದ ನಾಯಕರೂ ಅಲ್ಲ, ಬಿಜೆಪಿ ಅಧ್ಯಕ್ಷರೂ ಅಲ್ಲ ಎಂದು ತಿಳಿಸಿದರು.
ಚುನಾವಣಾ ಅಕ್ರಮ: ಯಾರೇ ಆದರೂ ಕ್ರಮ ಕೈಗೊಳ್ಳಿ
ಕಾಂಗ್ರೆಸ್ ಪಕ್ಷಕ್ಕೆ ಸೇರಿದೆಯೆನ್ನಲಾದ ಎರಡು ಕೋಟಿ ಹಣ ಸಿಕ್ಕಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ನನಗೆ ಈ ಬಗ್ಗೆ ತಿಳಿದಿಲ್ಲ. ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿ ಎಂದರು. ಜೊತೆಗೆ ಬಿಜೆಪಿಯ ಡಾ. ಸುಧಾಕರ್ ಅವರಿಗೆ ಸೇರಿದ 4.8 ಕೋಟಿ ರೂ. ದೊರೆತಿದ್ದು, ಮಹಜರು ನಡೆದು, ಎಫ್.ಐ.ಆರ್. ಅಗಿದೆಯಲ್ಲ. ಅದಕ್ಕೆ ಏನು ಹೇಳುತ್ತೀರಿ? ಯಾರೇ ಅಕ್ರಮ ಮಾಡಿದರೂ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನಿಸಿದರು.