ರಾಯಚೂರು : ಅರೆಬೆಂದ ಆಹಾರ ಸೇವಿಸಿ ವಸತಿ ನಿಲಯದ 24 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.
ಸಿಂಧನೂರಿನ ಅಂಬೇಡ್ಕರ್ ವಸತಿ ನಿಲಯದಲ್ಲಿ ನಿನ್ನೆ ಮಧ್ಯಾಹ್ನದ ಊಟ ಸೇವಿಸಿದ ಬಳಿಕ 24 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಎರಡು ಗಂಟೆ ವಿದ್ಯಾರ್ಥಿನಿಯರು ನರಳಾಡಿದ್ದಾರೆ.
ಅಸ್ವಸ್ಥ ವಿದ್ಯಾರ್ಥಿನಿಯರನ್ನು ತಡರಾತ್ರಿಯೇ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ವೈದ್ಯರು ಇಲ್ಲದ ಕಾರಣ ಅಸ್ವಸ್ಥ ವಿದ್ಯಾರ್ಥಿನಿಯರು ಪರದಾಟ ಅನುಭವಿಸಬೇಕಾಯಿತು. ಬಳಿಕ ಟಿಎಚ್‌ಓಗೆ ಕರೆ ಮಾಡಿ ಹಾಸ್ಟೆಲ್ ಸಿಬ್ಬಂದಿ ಮಾಹಿತಿ ತಿಳಿಸಿದ್ದರು. ಎರಡು ಗಂಟೆ ತಡವಾಗಿ ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ್ ಪೊತೆದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.