ಬೆಂಗಳೂರು: ಸಿದ್ದರಾಮಯ್ಯನವರ ಸರಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಆತಂಕ ವ್ಯಕ್ತಪಡಿಸಿದರು.
ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆಯಾಗಿದೆ. ತನ್ನದೇ ಪಕ್ಷದ ಚುನಾಯಿತ ಪ್ರತಿನಿಧಿಯ ಮಗಳ ಹತ್ಯೆಗೆ ನ್ಯಾಯ ಒದಗಿಸುವುದನ್ನು ಬಿಟ್ಟು ಆರೋಪಿ ಮನೆಗೆ ರಕ್ಷಣೆ ಭಾಗ್ಯ ಕೊಡುತ್ತಿರುವ ಸರಕಾರಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ನೋವಿನಿಂದ ನುಡಿದರು.
ಭಾರತದ ಭವಿಷ್ಯಕ್ಕಾಗಿ ಮತ ಕೇಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಿದ ಮತಾಂಧರನ್ನು ಹಿಡಿಯದೆ ಹಾಗೇ ಬಿಟ್ಟಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಾಮನವಮಿ ಹಬ್ಬದ ದಿನ ರಾಮಭಕ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಕಲಾವಿದರಾದ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿಯ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಬೆಳಗಾವಿಯಲ್ಲಿ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಪಮಾನಿಸಿದ ಪ್ರಕರಣ ಹಾಗೂ ಉಡುಪಿಯ ಹಾಸ್ಟೆಲ್ ಒಂದರಲ್ಲಿ ಹೆಣ್ಮಕ್ಕಳ ವಿಡಿಯೋ ಮಾಡಿದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಂದಿಲ್ಲ. ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವುದನ್ನು ನೋಡಿದರೆ ಮಹಿಳೆಯರು ಕರ್ನಾಟಕದಲ್ಲಿ ಭಯದ ವಾತಾವರಣದಲ್ಲಿ ಬದುಕುತ್ತಿರುವುದು ಸ್ಪಷ್ಟ ಎಂದರು.
ಶಿವಮೊಗ್ಗದಲ್ಲಿ ಔರಂಗಬೇಬ್ ದ್ವಾರ ನಿರ್ಮಾಣ, ಕೋಲಾರದಲ್ಲಿ ತಳವಾರು ಕಟೌಟ್ ಪ್ರದರ್ಶನ ಮಾಡಿದ ಪ್ರಕರಣ, ಹನುಮಾನ್ ಚಾಲೀಸ ಹಾಡನ್ನು ಬಿತ್ತರಿಸಿದ ಯುವಕನಿಗೆ ಥಳಿಸಿದವರನ್ನು ಹಾಗೇ ಬಿಟ್ಟದ್ದು, ರಾಮಮಂದಿರದ ಕರಸೇವಕರ ಮೇಲೆ ಪ್ರಕರಣ ದಾಖಲಿಸಿದ್ದು ಗಮನಿಸಿದರೆ ರಾಜ್ಯ ಸರಕಾರದ ಆಡಳಿತ ವೈಖರಿ ಅರ್ಥವಾಗುತ್ತದೆ ಎಂದು ನುಡಿದರು. ಮಂಡ್ಯದಲ್ಲಿ ಕೇಸರಿ ಧ್ವಜವನ್ನು ತೆರವುಗೊಳಿಸಿದ್ದಾರೆ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯರ ಸರಕಾರ ದಿವಾಳಿ..
ಸಿದ್ದರಾಮಯ್ಯರ ಸರಕಾರ ದಿವಾಳಿಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ರಾಜ್ಯದ ಯಾವುದಾದರೂ ಮೂಲೆಯಲ್ಲಿ ಒಂದು ಕಿಮೀ ರಸ್ತೆ ಕಾಮಗಾರಿ ನಡೆಯುತ್ತಿದ್ದರೆ ತೋರಿಸಿ ಎಂದು ಮಾಧ್ಯಮದವರಿಗೆ ಕೋರಿದರು. ನೀರಾವರಿ ಯೋಜನೆಗಳೂ ಸಂಪೂರ್ಣ ಸ್ಥಗಿತವಾಗಿವೆ. ಗುಂಡಿಬಿದ್ದ ರಸ್ತೆಗಳ ಗುಂಡಿ ಮುಚ್ಚಲೂ ಇವರಿಂದ ಆಗುತ್ತಿಲ್ಲ ಎಂದು ಟೀಕಿಸಿದರು.
ಜನಹಿತವನ್ನು ಸಂಪೂರ್ಣ ಮರೆತು ಒಂದು ರೀತಿ ತುಘಲಕ್ ದರ್ಬಾರ್ ನಡೆಸುತ್ತಿರುವ ಈ ಸರಕಾರಕ್ಕೆ ಜನರೇ ಇವತ್ತು ಛೀಮಾರಿ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ರಾಜ್ಯಕ್ಕೆ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲಲಿದ್ದೇವೆ ಎಂದು ವಿಶ್ವಾಸದಿಂದ ನುಡಿದರು. ಕಾಂಗ್ರೆಸ್ಸಿನವರು ತಾವು ಗೆಲ್ಲುವ ಮೂರ್ನಾಲ್ಕು ಕ್ಷೇತ್ರಗಳ ಹೆಸರು ಹೇಳಲಿ ಎಂದು ಸವಾಲೆಸೆದರು.
ಪ್ರಧಾನಿಯವರಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ನಾಡಿದ್ದು ಗೃಹ ಸಚಿವ ಅಮಿತ್ ಶಾ ಜೀ ಅವರೂ ಪ್ರವಾಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಬೆಂಗಳೂರನ್ನ ‘ಟ್ಯಾಂಕರ್ ಸಿಟಿ’ ಎನ್ನುವ ‘ಮೋದಿ’ ಏನು ‘ಐಟಿ ಸಿಟಿ’ ಮಾಡಿದ್ರಾ..?- ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ
ಕರ್ನಾಟಕಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!