ಹುಬ್ಬಳ್ಳಿ: ನೇಹಾ ಹಿರೇಮಠ್ ಕೊಲೆ ಪ್ರಕರಣದ ಆರೋಪಿ ಮೊಹಮ್ಮದ್ ಫಯಾಜ್ ಅವರ ತಂದೆ ಬಾಬಾ ಸಾಹೇಬ್ ಸುಭಾನಿ ಹಾಗೂ ತಾಯಿ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, “ಕಾನೂನಿನ ಅಡಿಯಲ್ಲಿ ಯಾವುದೇ ಶಿಕ್ಷೆ ನೀಡಿದರೂ ನಾನು ಸ್ವಾಗತಿಸುತ್ತೇನೆ. ನೇಹಾ ಅವರ ಕುಟುಂಬ, ರಾಜ್ಯದ ಜನರು ಮತ್ತು ಮುನವಳ್ಳಿಯ ಜನರು ನನ್ನನ್ನು ಕ್ಷಮಿಸಬೇಕು ಅಂತ ಹೇಳಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಸುಭಾನಿ, “ನನ್ನ ಮಗನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಮತ್ತು ಭವಿಷ್ಯದಲ್ಲಿ ಯಾರೂ ಇಂತಹ ಕ್ರೂರ ಅಪರಾಧವನ್ನು ಮಾಡಬಾರದು” ಎಂದು ಹೇಳಿದರು. ಭಾರತದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಸಾಂಸ್ಕೃತಿಕ ಗೌರವವನ್ನು ಎತ್ತಿ ತೋರಿಸಿದ ಅವರು, “ನಾವು ಹೆಣ್ಣು ಮಕ್ಕಳನ್ನು ಪೂಜಿಸುತ್ತೇವೆ. ನಮ್ಮದು ಹೆಣ್ಣುಮಕ್ಕಳನ್ನು ದೇವತೆಗಳಾಗಿ ಪೂಜಿಸುವ ದೇಶ, ನಾನು ಕರ್ನಾಟಕದ ಜನತೆಯ ಕ್ಷಮೆಯಾಚಿಸುತ್ತೇನೆ. ಈ ಘಟನೆಯು ಮುನವಳ್ಳಿ ಪಟ್ಟಣಕ್ಕೆ ಕಪ್ಪು ಚುಕ್ಕೆಯಾಗಿದ್ದು, ಮುನವಳ್ಳಿಯ ಯುವಕರು ಶಾಂತಿ ಕಾಪಾಡಬೇಕೆಂದು ನಾನು ಒತ್ತಾಯಿಸುತ್ತೇನೆ ಅಂತ ಹೇಳಿದರು.
ನೇಹಾ (Neha Hiremath) ಕೂಡ ನನ್ನ ಮಗಳು ಇದ್ದಂತೆ. ನೇಹಾ ಬೇರೆಯಲ್ಲ, ನನ್ನ ಮಗಳು ಬೇರೆಯಲ್ಲ. ನೇಹಾ ತಂದೆ-ತಾಯಿಗೆ ಆಗಿರುವಷ್ಟೇ ದುಃಖ ಆಗಿದೆ ಎಂದು ನೇಹಾ ಹತ್ಯೆಗೈದ ಫಯಾಜ್ ತಾಯಿ (Fayaz Mother) ಮುಮ್ತಾಜ್ ಕಣ್ಣೀರಿಟ್ಟಿದ್ದಾರೆ.