ಬೆಂಗಳೂರು: ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಬಂದು ರಾಜ್ಯಕ್ಕೆ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯಗಳ ಬಗ್ಗೆ ಒಂದಕ್ಕೂ ಉತ್ತರ ಕೊಡಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು,ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಲು ಮೋದಿಯವರ ಬಳಿ ಏನೂ ಇಲ್ಲ.. ಹೀಗಾಗಿ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಬಗ್ಗೆ ಮಾತಾಡ್ತಾರೆ.
ದೇಶದ ಪ್ರಧಾನಿಯವರಿಂದ ಈ ರೀತಿಯ ಭಾಷಣವನ್ನ ಕರ್ನಾಟಕದ ಜನರು ನಿರೀಕ್ಷಿಸಿರಲಿಲ್ಲ. ಕರ್ನಾಟಕ ದಿವಾಳಿಯಾಗಿದೆ ಎಂದು ಹೇಳಿದ್ದಾರೆ. ಆದರೆ ದೇಶದಲ್ಲಿಯೇ ಕರ್ನಾಟಕ ಹೆಚ್ಚು ಆದಾಯ ತಂದುಕೊಡುವ ಎರಡನೇ ರಾಜ್ಯವಾಗಿದೆ. ಕರ್ನಾಟಕದಿಂದ ಕೇಂದ್ರ ಸರ್ಕಾರ ಎಷ್ಟು ಟ್ಯಾಕ್ಸ್ ಪಡೆಯುತ್ತಿದೆ ಎಂಬುದನ್ನು ಮೋದಿಯವರು ಹೇಳಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು. ಕರ್ನಾಟಕದಿಂದ ಪ್ರತಿ ವರ್ಷ ನಾಲ್ಕು ಲಕ್ಷ ಕೋಟಿ ಆದಾಯ ಪಡೆದು ವಾಪಸ್ ಕರ್ನಾಟಕಕ್ಕೆ ತಾವು ಕೊಟ್ಡಿದ್ದೇನು ಎಂಬುದನ್ನು ಸ್ಪಷ್ಟವಾಗಿ ಜನರ ಮುಂದಿಡಲಿ ಎಂದರು.
ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಮಾತಾಡುವ ಮೋದಿಯವರು ಸಿಲಿಕಾನ್ ಸಿಟಿಯ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಎಷ್ಟರ ಮಟ್ಟಿಗೆ ಸಹಕರಿಸಿದೆ..? ಬೆಂಗಳೂರಿನ ನೀರಿನ ಮೂಲಗಳ ಅಭಿವೃದ್ಧಿಗೆ 3000 ಕೋಟಿ ಕೊಡ್ತೇವೆ ಎಂದವರು ಏಕೆ ಬಿಡುಗಡೆ ಮಾಡಲಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಅಕ್ಕಿ ಕೊಡುವುದನ್ನ ಮೋದಿ ಕಿ ಗ್ಯಾರಂಟಿ ಎಂದು ದೊಡ್ಡದಾಗಿ ಹೇಳಿಕೊಂಡಿದ್ದಾರೆ. ಫುಡ್ ಸೆಕ್ಯುರಿಟಿ ಕಾಯ್ದೆ ತರುವ ಮೂಲಕ 30 ರೂ ಕೆ.ಜಿ ಅಕ್ಕಿಯನ್ನ 3 ರೂಪಾಯಿಗೆ ಕೊಡುವ ನಿರ್ಧಾರ ಮಾಡಿದ್ದು ಕಾಂಗ್ರೆಸ್ ಯುಪಿಎ ಸರ್ಕಾರ. ಇದೀಗ ಮೋದಿಯವರು 3 ರೂ. ಇದ್ದಿದ್ದನ್ನ ಫ್ರೀ ಮಾಡಿದ್ದಾರೆ ಅಷ್ಟೇ. 30 ರೂ. ಇದ್ದಿದ್ದನ್ನ 3 ರೂಪಾಯಿಗೆ ಇಳಿಸಿದ ಕಾಂಗ್ರೆಸ್ ಸರ್ಕಾರದ ಸಾಧನೆ ದೊಡ್ಡದಲ್ಲವೇ.. ಕೇವಲ 3 ರೂಪಾಯಿ ಕಡಿಮೆ ಮಾಡಿರುವ ಮೋದಿಯವರದ್ದು ದೊಡ್ಡಸಾಧನೆಯೇ ಎಂದು ಗುಂಡೂರಾವ್ ಪ್ರಶ್ನಿಸಿದರು. 70 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತ ಆರೋಗ್ಯ ಭದ್ರತೆ ನೀಡುವ ಬಗ್ಗೆ ಮೋದಿಯವರು ಮಾತಾಡಿದ್ದಾರೆ. 70 ವರ್ಷ ಒಳಗಿನವರು ಏಲ್ಲಿಗೆ ಹೋಗಬೇಕು. 25 ಲಕ್ಷದ ವರೆಗೆ ಎಲ್ಲರಿಗೂ ಆರೋಗ್ಯ ವಿಮೆ ಕಲ್ಪಿಸುವ ಗ್ಯಾರಂಟಿಯನ್ನ ಕಾಂಗ್ರೆಸ್ ಘೋಷಿಸಿದೆ. ಕಾಂಗ್ರೆಸ್ ಗ್ಯಾರಂಟಿಗಳ ಮುಂದೆ ಮೋದಿಯವರ ಗ್ಯಾರಂಟಿ ಏನೂ ಇಲ್ಲ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಎಲೆಕ್ಟೋರಲ್ ಬಾಂಡ್ ಮೂಲಕ ದೇಶವನ್ನೇ ಬಿಜೆಪಿ ATM ಮಾಡಿಕೊಂಡಿದೆ
ಕರ್ನಾಟಕವನ್ನ ಕಾಂಗ್ರೆಸ್ ತನ್ನ ATM ಮಾಡಿಕೊಂಡಿದೆ ಎಂಬ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್, ಮೋದಿ ಮತ್ತು ಬಿಜೆಪಿಯವರು ಎಲೆಕ್ಟೋರಲ್ ಬಾಂಡ್ ನಲ್ಲಿ ದೇಶವನ್ನೇ ATM ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು. ಪ್ರಧಾನಿ ಅವರು ಈ ರೀತಿಯ ಹೇಳಿಕೆ ನೀಡುವುದು ಹಾಸ್ಯಾಸ್ಪದ.. ಎಲೆಕ್ಟೋರಲ್ ಬಾಂಡ್ ಒಂದು ರೀತಿಯ ಲೀಗಲ್ ಕರಪ್ಷನ್ ಆಗಿದೆ. ಇದಕ್ಕೆ ಮೋದಿಯವರ ಬಳಿ ಉತ್ತರವಿಲ್ಲ. PM ಕೇರ್ ಫಂಡ್ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಗುಂಡೂರಾವ್ ಒತ್ತಾಯಿಸಿದರು.
ಕುಮಾರಸ್ವಾಮಿ ಕ್ಷಮೆ ಕೇಳಬೇಕು
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್, ಕುಮಾರಸ್ವಾಮಿ ಅವರು ಮಹಿಳೆಯರ ಕ್ಷಮೆ ಕೇಳುವುದು ಉತ್ತಮ ಎಂದರು. ಕುಮಾರಾಸ್ವಾಮಿ ಅವರ ಪ್ರಕಾರ ಮಹಿಳೆಯರು ಮನೆಬಿಟ್ಟು ಹೊರಗೆ ಹೋಗಲೇಬಾರದಾ..? ದಾರಿ ತಪ್ಪಿದ್ದಾರೆ ಎಂದರೆ ಏನರ್ಥ. ತಮ್ಮ ಹೇಳಿಕೆಗೆ ವಿಷಾಧ ವ್ಯಕ್ಯಪಡಿಸಿದರೆ ಸಾಲದು. ಬಹಿರಂಗವಾಗಿ ಮಹಿಳೆಯರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ: ಏ.17ರ ಶ್ರೀರಾಮನವಮಿ, ಏ.21ರ ಮಹಾವೀರ ಜಯಂತಿಯಂದು ‘ಮಾಂಸ ಮಾರಾಟ’ ನಿಷೇಧ
BREAKING: ‘ಸಂಸದ ತೇಜಸ್ವಿ ಸೂರ್ಯ’ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ‘ಚುನಾವಣಾ ಆಯೋಗ’ಕ್ಕೆ ದೂರು