ಉಡುಪಿ : ರಂಜಾನ್ ಹಬ್ಬದಂದು ಉಡುಪಿಯಲ್ಲಿ ಹೃದಯ ವಿದ್ರಾವಕ ಘಟನೆ ಯೊಂದು ನಡೆದಿದ್ದು, ಉಡುಪಿ ಜಿಲ್ಲೆಯ ಕುಂದಾಪುರದ ಹೆಂಗವಳ್ಳಿ ಸಮೀಪದ ರೆಸಾರ್ಟೊಂದರ ವಾಟರ್ ಪಾರ್ಕ್ನಲ್ಲಿರುವ ಈಜುಕೊಳದಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ.
ಮೃತ ಬಾಲಕನನ್ನು ಉಡುಪಿ ಹೂಡೆಯ ಮುಹಮ್ಮದ್ ಅರೀಝ್(10) ಎಂದು ಗುರುತಿಸಲಾಗಿದೆ. ಈತ ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದ.
ಹಬ್ಬದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ವಾಟರ್ ಪಾರ್ಕ್ಗೆ ತೆರಳಿದ್ದ ಅರೀಝ್, ಆಟವಾಡುತ್ತಿರುವಾಗ ಅಕಸ್ಮಿಕವಾಗಿ ಈಜು ಕೊಳದ ನೀರಿಗೆ ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಬಾಲಕನ ಸಾವಿಗೆ ರೆಸಾರ್ಟ್ ನವರ ನಿರ್ಲಕ್ಷ್ಯವೇ ಕಾರಣ ಎಂದು ದೂರಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.