ಬೆಂಗಳೂರು: ಬಿಡದಿಯ ನನ್ನ ತೋಟವನ್ನು ಜೆಡಿಎಸ್ ಹೆಡ್ಡಾಫೀಸ್ ಎಂದು ಟೀಕೆ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ನಾನು ಕಾಂಗ್ರೆಸ್ ಕಚೇರಿಯನ್ನು ಹೆಡ್ಡಾಫೀಸ್ ಮಾಡಿಕೊಳ್ಳಲು ಸಾಧ್ಯವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತಾಡುತ್ತಾ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು; ಬಿಡದಿಯ ನನ್ನ ತೋಟವೇ ನನ್ನ ಪಕ್ಷದ ಹೆಡ್ಡಾಫೀಸ್. ಅದರಲ್ಲಿ ತಪ್ಪೇನಿದೆ? ನಾನು ಪಕ್ಷದ ಅಧ್ಯಕ್ಷನಿದ್ದೇನೆ. ಅಲ್ಲಿ ನಾನು ನಮ್ಮ ಪಕ್ಷದ ಕೆಲ ಮುಖಂಡರ ಸಭೆ ಕರೆದಿದ್ದೆ. ಅಲ್ಲದೆ, ನನ್ನ ತೋಟದಲ್ಲಿ 120 ಜನ ಈಗಲೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಮಾಡಬಾರದು ಅನ್ನೋಕೆ ಅದೇನು ಕಾಂಗ್ರೆಸ್ ಹೆಡ್ಡಾಫೀಸಾ? ಬಿಜೆಪಿಗೆ ಕೇಶವ ಕೃಪ ಹೇಗೋ ನಮ್ಮ ಪಕ್ಷಕ್ಕೆ ನಮ್ಮ ತೋಟದ ಮನೆಯೂ ಹಾಗೆಯೇ ಎಂದು ಕಾಂಗ್ರೆಸ್ ಪಕ್ಷವನ್ನು ಕುಟುಕಿದರು.
ಡಿಕೆ ಶಿವಕುಮಾರಗೆ ಚುನಾವಣಾ ಅಧಿಕಾರಿ ಊಟ ಬಡಿಸಿದ ಆರೋಪ ಸೇರಿದಂತೆ 5 ದೂರು ಸಲ್ಲಿಸಿದ ಬಿಜೆಪಿ
ಕಾಂಗ್ರೆಸ್ ನಾಯಕರು ವಿಧಾನಸಭೆ ಚುನಾವಣೆಗೆ ಮೊದಲು ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆಯಲ್ಲಿ ತೂರಾಡಿದ್ದು ಯಾರು? ನಾನು ತೂರಾಡಿದ್ನಾ? ನನಗೂ ಏನು ಮಾಡಬೇಕು, ಮಾಡಬಾರದು ಎಂದು ಗೊತ್ತಿದೆ. ಅಲ್ಲಿನ ತಹಶಿಲ್ದಾರ್ ಅವರಿಗೆ ಪದೇಪದೆ ಫೋನ್ ಕರೆ ಮಾಡಿ ಒತ್ತಡ ಹೇರಿದ್ದಾರೆ. ಏನು ಸಿಕ್ಕಿಲ್ಲ ಅಲ್ಲಿ. ಇಷ್ಟು ಚುನಾವಣೆ ಮಾಡಿದವನಿಗೆ ಏನು ಮಾಡಬೇಕು ಅನ್ನೋದು ಗೊತ್ತಿಲ್ಲವಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನಾವು ಬಿಡದಿ ತೋಟದಲ್ಲಿ ಗ್ಲಾಸ್ ಇಟ್ಟು ಪಾರ್ಟಿ ಮಾಡ್ತಿಲ್ಲ, ಹಾಗೆ ಮಾಡೋದು ಕಾಂಗ್ರೆಸ್ ಸಂಸ್ಕೃತಿ. ಅಂತಹ ಕೆಲಸವನ್ನು ಕಾಂಗ್ರೆಸ್ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಅವರು ಆರೋಪ ಮಾಡಿದರು.
‘ಬ್ರಿಟಿಷರ ಪರವಾಗಿ ನಿಂತವರು ಯಾರು?’ ಮೋದಿ ‘ಮುಸ್ಲಿಂ ಲೀಗ್’ ಹೇಳಿಕೆಗೆ ‘ರಾಹುಲ್ ಗಾಂಧಿ’ ತಿರುಗೇಟು
ಶ್ರೀಗಳನ್ನು ದುರುಪಯೋಗ ಮಾಡಿಕೊಂಡಿಲ್ಲ
ನಾನು ಎಂದೂ ಸಹ ಅಧಿಕಾರದಲ್ಲಿದ್ದಾಗ ನಮ್ಮ ಸಮುದಾಯದ ಸ್ವಾಮೀಜಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ. ನಾನು ಎಂದೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಜಾತ್ಯತೀತ ಅಂತ ಹೇಳೋರು, ಪ್ರತೀ ದಿನ ಜಾತಿ ಬಗ್ಗೆಯೇ ಮಾತಾಡ್ತಾರೆ. ನಮ್ಮ ಸಮಾಜದ ಜನ ದಡ್ಡರಲ್ಲ. ಇವರು ನಡೆಸುತ್ತಿರುವ ರಾಜಕೀಯ ಎಲ್ಲರಿಗೂ ಅರ್ಥ ಆಗುತ್ತಿದೆ ಎಂದು ಅವರು ಕಿಡಿಕಾರಿದರು.
ನನ್ನ ನೇತೃತ್ವದ ಮೈತ್ರಿ ಸರಕಾರ ಹೋಗಲಿಕ್ಕೆ ಕಾಂಗ್ರೆಸ್ ನಾಯಕರು ಏನೆಲ್ಲಾ ಮಾಡಿದರು ಎನ್ನುವುದು ನನಗೆ ಗೊತ್ತಿದೆ. ಆಗ ಕಾಂಗ್ರೆಸ್ ನಾಯಕರಲ್ಲಿಯೇ ಯಾಕೆ ಸಂಘರ್ಷ ನಡೆಯಿತು ಎನ್ನುವುದೂ ತಿಳಿದಿದೆ. ಧರ್ಮಸ್ಥಳದ ಸಿದ್ದವನದಲ್ಲಿ ಏನೇನ್ ನಡೆಯಿತು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಸರಕಾರ ರಚನೆಯಾದ ಮೂರೇ ತಿಂಗಳಿಗೆ ಲೋಕಸಭೆ ಚುನಾವಣೆ ಹೊತ್ತಿಗೆ ಸರಕಾರ ಹೋಗುತ್ತದೆ ಎಂದು ಹೇಳಿದವರು ಯಾರು? ಐದು ವರ್ಷ ಬೇಷರತ್ ಬೆಂಬಲ ಕೊಡುತ್ತೇವೆ ಎಂದಿದ್ದರು. ಆಮೇಲೆ ಏನಾಯಿತು? ಸಿದ್ದವನದಲ್ಲಿ ಅದಕ್ಕೆ ಔಷಧಿ ಅರೆದ್ರಲ್ವಾ? ಎಂದು ತರಾಟೆಗೆ ತೆಗೆದುಕೊಂಡರು ಮಾಜಿ ಮುಖ್ಯಮಂತ್ರಿಗಳು.
BREAKING : ಲೋಕಸಭಾ ಚುನಾವಣೆ 2024 : ಬಿಜೆಪಿ ಅಭ್ಯರ್ಥಿಗಳ 10ನೇ ಪಟ್ಟಿ ಬಿಡುಗಡೆ, ಇಲ್ಲಿದೆ ಲಿಸ್ಟ್
ಪ್ರತಿ ಯುಗಾದಿ ಹಬ್ಬದ ಮೇಲೆ ನಮ್ಮ ಗುರುಗಳ ಆಶೀರ್ವಾದ ಪಡೆಯುವುದು ನಾವು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ನಮ್ಮ ಪಕ್ಷದವರು, ಬಿಜೆಪಿ ನಾಯಕರು ಒಟ್ಟಾಗಿ ಬಂದು ಆಶೀರ್ವಾದ ಪಡೆದಿದ್ದೇವೆ. ಇದರಲ್ಲಿ ತಪ್ಪೇನು? ಎಂದು ಕೇಳಿದ ಅವರು;
ಪರಮಪೂಜ್ಯ ಶ್ರೀಗಳನ್ನು ಭೇಟಿ ಮಾಡಿ ಅವರನ್ನು ಬಳಸಿಕೊಳ್ಳುವ ಪ್ರಯತ್ನ ಮೊನ್ನೆ ಕಾಂಗ್ರೆಸ್ ಮಾಡಿದೆ. ರಾಜಕೀಯಕ್ಕೂ ಧರ್ಮಕ್ಕೂ ಏನ್ ಸಂಬಂಧ? ಧಾರ್ಮಿಕವಾಗಿ ನಾಡಿಗೆ ಮಾರ್ಗದರ್ಶನ ಮಾಡುತ್ತಿರುವ ಸ್ವಾಮೀಜಿಗಳನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಕುಮಾರಸ್ವಾಮಿ ಅವರು.
ಶ್ರೀಗಳ ಆಶೀರ್ವಾದ ಪಡೆದ ಮೈತ್ರಿಕೂಟದ ನಾಯಕರು
ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್ ಅವರ ನೇತೃತ್ವದಲ್ಲಿ ಜೆಡಿಎಸ್ ಬಿಜೆಪಿ ಪಕ್ಷಗಳ ನಾಯಕರು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು, ಮೈತ್ರಿಕೂಟದ ಅಭ್ಯರ್ಥಿಗಳಾದ ಯದುವೀರ್ ಚಾಮರಾಜ ಕೃಷ್ಣದತ್ತ ಒಡೆಯರ್, ವಿ.ಸೋಮಣ್ಣ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಮಲ್ಲೇಶ್ ಬಾಬು, ಡಾ.ಕೆ.ಸುಧಾಕರ್, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಡಾ.ಕೆ.ಸಿ.ನಾರಾಯಣಗೌಡ ಸೇರಿದಂತೆ ಎರಡೂ ಪಕ್ಷಗಳ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.