ಬೆಂಗಳೂರು : ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂದು ಹೇಳುತ್ತಾರೆ ಆದರೆ ಬೆಂಗಳೂರಿನಲ್ಲಿ ಹೆತ್ತ ತಾಯಿಯೊಬ್ಬಳು ಮಗನಿಗೆ ಕಳ್ಳತನದ ಟ್ರೇನಿಂಗ ಕೊಡುವುದಲ್ಲದೆ ಕೈಗೆ ಮಚ್ಚು ಕೊಟ್ಟು ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕಳ್ಳತನಕ್ಕೆ ಪ್ರೋತ್ಸಾಹ ನೀಡುತ್ತಿರುವ ಘಟನೆ ನಡೆದಿದ್ದು ಇದೀಗ ಇಬ್ಬರನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೌದು ಬೆಂಗಳೂರಿನಲ್ಲಿ ಸ್ವತಃ ಹೆತ್ತಮ್ಮನೇ ತನ್ನ ಮಗನಿಗೆ ಮಚ್ಚು ಹಾಗೂ ಚಾಕು ಕೊಟ್ಟು ಒಬ್ಬಂಟಿ ಮಹಿಳೆಯರನ್ನು ಬೆದರಿಸಿ ಚಿನ್ನ, ಬೆಳ್ಳಿ ಸೇರಿ ಬೆಲೆಬಾಳುವ ವಸ್ತುಗಳನ್ನು ರಾಬರಿ ಮಾಡಿಕೊಂಡು ಬರಲು ತರಬೇತಿ ನೀಡುತ್ತಿದ್ದಳು. ಈಗ ಪೊಲೀಸರು ಮಹಿಳೆಯಿಂದ ಬರೋಬ್ಬರಿ 103 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಮಗನನ್ನು ತಪ್ಪು ದಾರಿಗೆಳೆದ ತಾಯಿ ರೋಜ (32) ಎಂಬಾಕೆ ಆಗಿದ್ದಾಳೆ. ಈ ಘಟನೆಯ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ತಾಯಿ ಮತ್ತು ಅಪ್ರಾಪ್ತ ಮಗನನ್ನು ಬಂಧಿಸಲಾಗಿದೆ. ಈಕೆ ಹೆತ್ತ ತಾಯಿ ಆಗಿದ್ದರೂ ತನ್ನ ಮಗನಿಗೆ ದುಡಿದು ತಿನ್ನುವುದನ್ನು ಬಿಟ್ಟು ಕಳ್ಳತನ ಮಾಡೋದನ್ನ ಹೇಳಿಕೊಡುತ್ತಿದ್ದಳು.
ಒಂದು ಏರಿಯಾದಲ್ಲಿ ಮೂರ್ನಾಲ್ಕು ದಿನ ಕಾದು ಕುಳಿತು ಒಬ್ಬಂಟಿಯಾಗಿ ಯಾವ್ಯಾವ ಮಹಿಳೆಯರು ಬರುತ್ತಾರೆ, ಅವರ ಬಳಿಯಿರುವ ಚಿನ್ನ, ಬೆಳ್ಳಿ ಹಾಗೂ ಹಣ ತೆಗೆದುಕೊಂಡು ಹೋಗುವುದನ್ನು ವಾಚ್ ಮಾಡುತ್ತಿದ್ದಳು. ನಂತರ ಮಗನಿಗೆ ಮಚ್ಚು ಕೊಟ್ಟು ಕಳಿಸಿ, ಒಬ್ಬಂಟಿ ಮಹಿಳೆಯರಿಗೆ ಬೆದರಿಕೆ ಹಾಕಿ ಅವರ ಬಳಿಯಿರುವ ಚಿನ್ನ ಸೇರಿ ಯಾವುದೇ ಬೆಲೆ ಬಾಳುವ ವಸ್ತುಗಳಿದ್ದರೂ ಅದನ್ನು ಕಿತ್ತುಕೊಂಡು ಬರುವಂತೆ ಹೇಳುತ್ತಿದ್ದಳು.ನಂತರ, ಅಪ್ರಾಪ್ತ ಹುಡುಗನಿಗೆ ಸುಲಿಗೆ ಮಾಡಲು ಮುಂದೆ ಬಿಟ್ಟು, ತಾನೂ ಮಗನಿಗೆ ಸಾಥ್ ನೀಡುತ್ತಿದ್ದಳು.
ಒಂದು ವೇಳೆ ಮಗ ಏನಾದರೂ ಸಿಲುಕಿಕೊಳ್ಳುವ ಸಂದರ್ಭ ಬಂದಲ್ಲಿ ಈಕೆಯೇ ದರೋಡೆಕೋರ ಮಗನನ್ನು ರಕ್ಷಣೆ ಮಾಡುತ್ತಿದ್ದಳು. ಇದೇ ರೀತಿ ತಾಯಿ ಹಾಗೂ ಮಗ ಕೃತ್ಯ ಎಸಗುತ್ತಿದ್ದರು. ಈಗ ಮಹಿಳೆಯರು ದೂರು ನೀಡಿದ ಹಿನ್ನೆಲೆಯಲ್ಲಿ ಅನ್ನಪೂಣೇಶ್ವರಿ ನಗರ ಪೊಲೀಸರು ದೂರು ದಾಖಲಿಸಿಕೊಂಡು ತಾಯಿ-ಮಗನನ್ನು ಬಂಧಿಸಿದ್ದಾರೆ. ಬಂಧಿತ ತಾಯಿ ಮಗನಿಂದ 5 ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.