ಬೆಂಗಳೂರು : ನಾಗರಿಕ ಸೇವಾ ನಿಯಮ 14ಎ ಅಡಿ ಸರ್ಕಾರಿ ನೌಕರರ ವಿರುದ್ಧ ವಿಚಾರಣೆಗೆ ಕೇವಲ ಶಿಫಾರಸು ಮಾಡಬಹುದೇ ಹೊರತು, ವಿಚಾರಣೆ ನಡೆಸುವ ಹೊಣೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಲೋಕಾಯುಕ್ತ, ಉಪ ಲೋಕಾಯುಕ್ತರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಹೌದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಜಿ. ಯತೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಎಂ.ಜಿ.ಯತೀಶ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎನ್. ಎಸ್. ಸಂಜಯಗೌಡ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ತನ್ನ ಸಿಬ್ಬಂದಿ ವಿರುದ್ಧದ ಶಿಸ್ತು ಕ್ರಮದ ವಿಚಾರಣೆಯನ್ನು ಯಾರಿಗೆ ನೀಡಬೇಕೆಂಬ ಅಧಿಕಾರ ರಾಜ್ಯ ಸರ್ಕಾರಕ್ಕೆ ಮಾತ್ರ ಇರಲಿದೆ ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ವಿಚಾರ ಪರಿಶೀಲಿಸಿ ವಿವರವಾದ ವರದಿ ಪಡೆಯಲಾಗಿದೆ. ಅದರಂತೆ ಅರ್ಜಿದಾರರ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಹಾಗಾಗಿ ಸರ್ಕಾರ ಇಲಾಖಾ ವಿಚಾರಣೆ ಕೈಬಿಡುವುದು ಸೂಕ್ತ ಎಂದು ತಿಳಿಸಿತ್ತು. ಆದರೆ, ಸರ್ಕಾರಿ ವಕೀಲರು, ಸರ್ಕಾರಕ್ಕೆ ತನ್ನ ಉದ್ಯೋಗಿಗಳ ವಿರುದ್ಧ ಮಾತ್ರವಲ್ಲ, ಸಾಂಸ್ಥಿಕ ಮಂಡಳಿಗಳ ನೌಕರರ ವಿರುದ್ಧವೂ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಂದ ಇಲಾಖೆ ವಿಚಾರಣೆ ನಡೆಸುವ ಅಧಿಕಾರವಿದೆ ಎಂದು ವಾದ ಮಂಡಿಸಿದ್ದರು.
ಸಿಸಿಎ ನಿಯಮ 14ಎ ಪ್ರಕಾರ ಸರ್ಕಾರ ತನ್ನ ಸಿಬ್ಬಂದಿ ವಿರುದ್ಧದ ದುರ್ನಡತೆ ಆರೋಪಗಳ ಬಗ್ಗೆ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರಿಂದ ವಿಚಾರಣೆಗೆ ಆದೇಶ ನೀಡಬಹುದು ಮತ್ತು ಆ ನಂತರ ನಿಯಮ 12ರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.