ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಒಂದು ಟಿಕೆಟ್ ಕೌಂಟರ್ ನಲ್ಲಿ ಯುಪಿಐ ಮೂಲಕ ಟಿಕೆಟ್ ಶುಲ್ಕ ಪಾವತಿಸಿ, ರೈಲ್ವೆ ಪ್ರಯಾಣಿಕರು ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಕ್ಯೂಆರ್ ಕೋಡ್ ಆಧಾರಿತ ಯುಪಿಐ ಪಾವತಿಯನ್ನು ಮೆಜೆಸ್ಟಿಕ್ನ ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣದ ಒಂದು ಕೌಂಟರ್ನಲ್ಲಿ ಸಕ್ರಿಯಗೊಳಿಸಲಾಗಿದೆ. ಇದು ರೈಲ್ವೆ ಸಚಿವಾಲಯದ ಪೈಲಟ್ ಯೋಜನೆಯಾಗಿದೆ. ಶೀಘ್ರದಲ್ಲೇ, ಇದನ್ನು ಎಸ್ಬಿಸಿ ವಿಭಾಗದ ಎಲ್ಲಾ ಕೌಂಟರ್ಗಳಲ್ಲಿ ಸಕ್ರಿಯಗೊಳಿಸಲಾಗುವುದು. ಟಿಕೆಟ್ ಕೌಂಟರ್ ಗಳಲ್ಲಿ ಟಿಕೆಟ್ ಖರೀದಿಸಲು ಯುಪಿಐ ಪಾವತಿಗಳನ್ನು ಬಳಸಲು ಇದು ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದಿದೆ.
ಆದಾಗ್ಯೂ, ಯುಟಿಎಸ್ ಆನ್ ಮೊಬೈಲ್ ಅಪ್ಲಿಕೇಶನ್ ಈಗಾಗಲೇ ಪ್ಲೇ ಸ್ಟೋರ್ / ಆಪ್ ಸ್ಟೋರ್ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಪ್ರಯಾಣಿಕರಿಗೆ ಟಿಕೆಟ್ ಕೌಂಟರ್ ಗಳಿಗೆ ಭೇಟಿ ನೀಡದೆ ತಮ್ಮ ಮೊಬೈಲ್ ಗಳ ಮೂಲಕ ಯುಟಿಎಸ್ ಮೊಬೈಲ್ ಟಿಕೆಟ್ ಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದೆ.
ಈ ಸುಧಾರಣೆಗಳು ಭಾರತವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನ ಆರ್ಥಿಕತೆಯಾಗಿ ಪರಿವರ್ತಿಸುವ ದೃಷ್ಟಿಕೋನದೊಂದಿಗೆ ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುತ್ತವೆ. ಕಾಯ್ದಿರಿಸದ ಟಿಕೆಟ್ ಗಳನ್ನು ಸುಲಭ ಮತ್ತು ತ್ವರಿತ ರೀತಿಯಲ್ಲಿ ಖರೀದಿಸಲು ಇದು ಪ್ರಯಾಣಿಕರಿಗೆ ವ್ಯಾಪಕವಾಗಿ ಪ್ರಯೋಜನವನ್ನು ನೀಡುತ್ತದೆ ಎಂದಿದೆ.
ಆಕಾಶ್ ಗಾಳಿ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಭಾರತೀಯ ಸೇನೆ | Watch Video
ತಿಂಗಳ ಮೊದಲ ದಿನವೇ `ಗ್ರಾಹಕರಿಗೆ ಗುಡ್ ನ್ಯೂಸ್’ : ‘LPG’ ವಾಣಿಜ್ಯ ಸಿಲಿಂಡರ್ ಬೆಲೆ 32 ರೂ. ಇಳಿಕೆ