ಬೆಂಗಳೂರು : ವಿವಾದಗಳಿಂದಲೇ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಮತ್ತೊಂದು ಅಚ್ಚರಿ ನಡೆದಿದ್ದು, ಈ ಬಾರಿ ಜೂನಿಯರ್ ಎಂಜಿನಿಯರ್ ಹುದೆಗಳ ನೇಮಕಾತಿಯ ಆಯ್ಕೆಪಟ್ಟಿಯೇ ನಾಪತ್ತೆಯಾಗಿದೆ.ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಗೆ ಕೆಪಿಎಸ್ ಅಧಿಕಾರಿ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
2016 ರಲ್ಲಿ ಕೊಳಗೇರಿ ಮಂಡಳಿ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷೆ ನಡೆದಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ಎಚ್.ಡಿ. ವಿವೇಕಾನಂದ ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಂತರ ಹೈಕೋರ್ಟ್ ಆದೇಶದಂತೆ ಕೆಪಿಎಸ್‌ಸಿಯ ಗೌಪ್ಯ ಶಾಖೆ-3ರಲ್ಲಿ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಲಾಗಿತ್ತು. ಅಲ್ಲಿಂದ ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ಶಾಖೆಗೆ ರವಾನಿಸಲು ಜನವರಿ 22 ರಂದು ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಡತ ಸ್ವೀಕಾರ ಮಾಡಲಾಯಿತು. ಆ ಬಳಿಕ ಕಡತ ನಾಪತ್ತೆ ಎಂದು ದೂರು ದಾಖಲಿಸಲಾಗಿದೆ.
ಬಳಿಕ ಕೆಪಿಎಸ್ಸಿ ಯ ಎಲ್ಲಾ ಶಾಖೆಗಳಲ್ಲೂ ಕಡತಕ್ಕಾಗಿ ಶೋಧ ನಡೆಸಲಾಗಿದೆ. ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೆ-2ಕ್ಕೆ ಹಿಂದಿರುಗಿಸುವಂತೆ ಕೆಪಿಎಸ್ಸಿ ಸೂಚನೆ ನೀಡಿತ್ತು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಎಲ್ಲಾ ಶಾಖೆಗಳಿಗೆ ಖುದ್ದಾಗಿ ತೆರಳಿ ಕಡತಕ್ಕಾಗಿ ಹುಡುಕಾಟ ನಡೆಸಲಾಗಿದೆ. ಆಗಲೂ ಕಡತ ಸಿಕ್ಕಿಲ್ಲ. ಹೀಗಾಗಿ, ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಅಂತಿಮವಾಗಿ ಮಾ.13ರಂದು ಆಯೋಗದ ಸಭೆ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡಲು ತೀರ್ಮಾನಿಸಲಾಗಿತ್ತು. ಕಡತ ನಾಪತ್ತೆ ಬಗ್ಗೆ ಕೆಪಿಎಸ್ಸಿ ಸಹಾಯಕ ಕಾರ್ಯದರ್ಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.