ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಎರಡೂ ಚಿನ್ಹೆಯನ್ನು ಸಮತಲವಾಗಿ ಬಳಸುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಖಡಕ್ ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದಲ್ಲಿ ದಿನಾಂಕ: 26-04-2024 ಮತ್ತು 07-05-2024 ರಂದು ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ (NDA)-ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ ಎಂದಿದ್ದಾರೆ.
ಈ ಚುನಾವಣೆಯನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸಬೇಕಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ನರೇಂದ್ರ ಮೋದಿಯವರ ನೇತೃತ್ವದ NDA ಮೈತ್ರಿಕೂಟವನ್ನು ಬೆಂಬಲಿಸಿ ಎರಡು ಪಕ್ಷಗಳು ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಗಾಗಿ ಬೆಂಬಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳ ಪೈಕಿ, ಮಂಡ್ಯ, ಹಾಸನ ಮತ್ತು ಕೋಲಾರ (ಮೀಸಲು) ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಉಳಿದ 25 ಲೋಕಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿಕೂಟದ ಎರಡು ಪಕ್ಷಗಳು ಶ್ರೀ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರವನ್ನು ಬೆಂಬಲಿಸುತ್ತ ಮೈತ್ರಿ-ಧರ್ಮಪಾಲನೆ ಮಾಡಬೇಕಾಗುತ್ತದೆ. ಅಂತೆಯೇ ಜನತಾದಳ (ಜಾತ್ಯತೀತ) ಪಕ್ಷದ ತತ್ವ, ಸಿದ್ದಾಂತ ಮತ್ತು ಬದ್ದತೆಗೆ ದಕ್ಕೆಯಾಗದ ರೀತಿಯಲ್ಲಿ ಚುನಾವಣೆ ಪ್ರಚಾರವನ್ನು ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸುವ ಸಾರ್ವಜನಿಕ ಸಭೆ ಮತ್ತು ಪ್ರಚಾರ ಸಭೆಗಳಲ್ಲಿ ಎರಡು ಪಕ್ಷದ ನಾಯಕರುಗಳು ಯಾವುದೇ ವಿವಾದಾತ್ಮಕ ಹೇಳಿಕೆಗಳಿಗೆ ಆಸ್ಪದ ನೀಡದೆ ಸಮನ್ವಯತೆಯಿಂದ ಚುನಾವಣೆಯನ್ನು ನಡೆಸುವುದು. ಮೈತ್ರಿ ಅಭ್ಯರ್ಥಿಗಳ ಬಗ್ಗೆ ಯಾವುದೇ ಅಸಮಾಧಾನವನ್ನು ಯಾವುದೇ ಸಂದರ್ಭದಲ್ಲಿ ವ್ಯಕ್ತಪಡಿಸಬಾರದು ಎಂದು ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಭಾರತದ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಪ್ರಚಾರ ನಡೆಸಬೇಕು. ಈ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ತನ್ನದೇ ಆದ ವಿಭಿನ್ನ ತತ್ವ ಸಿದ್ದಾಂತಗಳನ್ನು ಹೊಂದಿದ್ದರೂ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಮನ್ವಯತೆಗೆ ಒತ್ತು ನೀಡಬೇಕು. ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿ, ಸಮಾಜ ಅಥವಾ ಧರ್ಮ ನಿಂದನೆಗೆ ಅವಕಾಶ ನೀಡಬಾರದು. ಜೆಡಿಎಸ್ ಪಕ್ಷದ ಜನಪರ ಹೋರಾಟಗಳಾದ ಕನ್ನಡ, ಪ್ರಾದೇಶಿಕತೆ, ಜಾತ್ಯತೀತ, ನೀರಾವರಿ ಮತ್ತು ರೈತಪರವಾದ ನಿಲುವುಗಳ ಪ್ರಚಾರಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಅದೇ ರೀತಿ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಿಗಳು ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾದ ಶ್ರೀ ಹೆಚ್.ಡಿ ದೇವೇಗೌಡ ರವರು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನಮಂತ್ರಿಗಳಾಗಿ ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಸಾರ್ವಜನಿಕ ಸಭೆಗಳಲ್ಲಿ ಉಲ್ಲೇಖಿಸಿ
ಮತಯಾಚಿಸಬೇಕು ಎಂದು ತಿಳಿಸಿದ್ದಾರೆ.
ಮುಂದುವರೆದು, ರಾಜ್ಯದಲ್ಲಿ 2006-2008 ರಲ್ಲಿದ್ದ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಮತ್ತು 2018-19 ರಲ್ಲಿದ್ದ ಜೆಡಿಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಶ್ರೀ ಹೆಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ರೈತರ ಸಾಲಮನ್ನಾ ಹಾಗೂ ಮಹಿಳೆಯರಿಗೆ ಮತ್ತು ಅಬಾಲ ವೃದ್ಧರಿಗೆ ನೀಡಿದ ಕೊಡುಗೆಗಳನ್ನೂ ಸಹ ಜನತೆಗೆ ಪರಿಚಯಿಸಬೇಕು ಎಂದಿದ್ದಾರೆ.
ಜೆಡಿಎಸ್ ಪಕ್ಷದ ವತಿಯಿಂದ ಚುನಾವಣಾ ಉಸ್ತುವಾರಿಗಳಾಗಿ ಲೋಕಸಭಾವಾರು ನಾಯಕರು ಮತ್ತು ಸಹ ನಾಯಕರನ್ನು ಈಗಾಗಲೇ ನೇಮಿಸಿ ಆದೇಶ ಹೊರಡಿಸಿದೆ. ಈ ಉಸ್ತುವಾರಿ ನಾಯಕರು ಮತ್ತು ಜಿಲ್ಲಾಧ್ಯಕ್ಷರು ಚುನಾವಣಾ ಪ್ರಚಾರದ ಕಾರ್ಯತಂತ್ರಗಳನ್ನು ರೂಪಿಸಲು, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತ್ಯೇಕವಾಗಿ ಸಭೆಗಳನ್ನು ಏರ್ಪಡಿಸುವುದು. ತದನಂತರ ಬಿಜೆಪಿ ಲೋಕಸಭಾವಾರು ನೇಮಿಸಿರುವ ಪ್ರಭಾರಿಗಳೊಂದಿಗೆ ಚರ್ಚಿಸಿ, ಎರಡು ಪಕ್ಷಗಳು ಜಂಟಿ ಸಭಾಂಗಣ ಸಭೆಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ.
ಮುಂದುವರೆದು, ಈಗಾಗಲೇ ಕೇಂದ್ರ ಕಚೇರಿಯಿಂದ ವಿಧಾನಸಭಾವಾರು ಉಸ್ತುವಾರಿ ನಾಯಕರು ಮತ್ತು ಸಹನಾಯಕರುಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಆದ್ದರಿಂದ ತಾಲ್ಲೂಕು ಶಾಸಕರು ಹಾಗೂ ಕಳೆದ ಅಧ್ಯಕ್ಷರುಗಳು, ವಿಧಾನಸಭಾ ಸದಸ್ಯರು, ಮಾಜಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ, ತದನಂತರ ತಾಲ್ಲೂಕು ಬಿಜೆಪಿ ಪ್ರಭಾರಿಗಳೊಂದಿಗೆ ಜಂಟಿ ಸಭಾಂಗಣ ಸಭೆಗಳನ್ನು ನಡೆಸುವುದು ಎಂದಿದ್ದಾರೆ.
ವಿಧಾನಸಭಾ ಜೆಡಿಎಸ್ನ ಜಿಲ್ಲಾಧ್ಯಕ್ಷರು ಮತ್ತು ಲೋಕಸಭಾ ಉಸ್ತುವಾರಿಗಳು ಬಿಜೆಪಿಯಿಂದ ಲೋಕಸಭೆ ಪ್ರಭಾರಿಗಳಾಗಿ ನೇಮಕವಾಗಿರುವವರೊಂದಿಗೆ ಸಮನ್ವಯ ಸಭೆಗಳನ್ನು ಆಯೋಜಿಸಿ ಈ ಕೆಳಕಂಡ ನಿಯಮಗಳನ್ನು ಪಾಲಿಸುವುದು ಎಂದು ಖಡಕ್ ಪರ್ಮಾನು ಹೊರಡಿಸಿದ್ದಾರೆ.
1. ಎರಡು ಪಕ್ಷಗಳು ಎರಡು ಪಕ್ಷದ ಚಿಹ್ನೆಗಳನ್ನು ಸಮ ಅಳತೆಯಲ್ಲಿ ಬಳಸಬೇಕು.
2. ಸಾರ್ವಜನಿಕ ಸಭೆ ಮತ್ತು ಚುನಾವಣಾ ಪ್ರಚಾರ ಸಭೆಗಳಲ್ಲಿ ಎರಡು ಪಕ್ಷಗಳ ಬಾವುಟಗಳನ್ನು ಪ್ರದರ್ಶಿಸಬೇಕು.
3. ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ನಾಯಕರ ಫೋಟೊಗಳನ್ನು ಭೇದವಿಲ್ಲದೇ ಉಪಯೋಗಿಸಿಕೊಳ್ಳಬೇಕು.
4. ಸಭೆಗಳಲ್ಲಿ ಕಡ್ಡಾಯವಾಗಿ ಎರಡು ಪಕ್ಷಗಳ ಕಾರ್ಯಕರ್ತರುಗಳು ತಮ್ಮ ತಮ್ಮ ಪಕ್ಷದ ಶಾಲುಗಳನ್ನು ಬಳಸಬೇಕು.
5. ರಾಷ್ಟ್ರ ಮತ್ತು ರಾಜ್ಯಮಟ್ಟದ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಾಧನೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು.
6. ಲೋಕಸಭಾ ಕ್ಷೇತ್ರ/ಜಿಲ್ಲಾ ವಿಧಾನಸಭವಾರು ಮುಖಂಡರ ಫೋಟೋಗಳನ್ನು ಕ್ಷೇತ್ರವಾರು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಬಳಸಬೇಕು.
7. 2019 ರ ಲೋಕಸಭೆ ಮತ್ತು 2023 ರ ವಿಧಾಸಭೆ ಚುನಾವಣೆ ಫಲಿತಾಂಶದ ಕೋಷ್ಠಕವನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಈ ವಿವರಗಳನ್ನು ವಿಮರ್ಶಿಸಿ, ಮೈತ್ರಿ ಪಕ್ಷದೊಂದಿಗೆ ಚರ್ಚಿಸಿ, ಮತಗಟ್ಟೆ ಸಮಿತಿಗಳನ್ನು ರಚಿಸಿ, ಮತದಾರರನ್ನು ಮತಗಟ್ಟೆಗೆ ಕರೆತಂದು ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡುವಂತೆ ಕ್ರಮವಹಿಸುವುದು.
8. ಚುನಾವಣಾ ಸಾರ್ವಜನಿಕ ಸಭೆ ಮತ್ತು ಪ್ರಚಾರ ಸಭೆಗಳಲ್ಲಿ ಗೊಂದಲ ಉಂಟು ಮಾಡಿಕೊಳ್ಳಬಾರದು. ಒಂದು ವೇಳೆ ಕಠಿಣ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಪಕ್ಷದ ಕೇಂದ್ರ ಕಚೇರಿಯ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು.
ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಎರಡು ಪಕ್ಷಗಳ ಮುಖಂಡರುಗಳು ಮುಂಬರುವ ಚುನಾವಣೆಯಲ್ಲಿ ಅಳವಡಿಸಿಕೊಂಡು, ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಪ್ರವೃತ್ತರಾಗುತ್ತೀರೆಂದು ಆಶಿಸುತ್ತೇನೆ.
ಮೊದಲ ದಿನದ ‘SSLC ಪರೀಕ್ಷೆ’ ಯಶಸ್ವಿ: ‘8.32 ಲಕ್ಷ ವಿದ್ಯಾರ್ಥಿ’ಗಳು ಹಾಜರ್, ಓರ್ವ ಡಿಬಾರ್
BREAKING: ಬಿಗ್ ಬಾಸ್ ಕನ್ನಡ ಖ್ಯಾತಿಯ ‘ಸೋನು ಶ್ರೀನಿವಾಸಗೌಡ’ಗೆ ’14 ದಿನ’ ನ್ಯಾಯಾಂಗ ಬಂಧನ, ಜೈಲುಪಾಲು