ಹೆಣ್ಣುಮಕ್ಕಳಿಗೆ ಮೇಕಪ್ ಮಾಡಿಕೊಳ್ಳುವುದೆಂದರೆ ಎಷ್ಟು ಇಷ್ಟವೋ ಮೆಹಂದಿ ಹಾಕಿಕೊಳ್ಳುವುದೆಂದರೂ ಅಷ್ಟೇ ಇಷ್ಟ. ಕೈಮೇಲೆ ಚೆಂದದ ಚಿತ್ರ ಬಿಡಿಸಿ ಅಂದು ಕೆಂಬಣ್ಣಕ್ಕೆ ತಿರುಗಿದರೆ ಅದರ ಖುಷಿಯೇ ಬೇರೆ.
ಮದುವೆ ಸಮಾರಂಭಗಳಲ್ಲಿ ಹೆಂಗಳೆಯರ ಕೈ ಕೆಂಪೇರದೇ ಸಡಗರವೇ ಇಲ್ಲ. ಮದುಮಗಳಿಗಂತೂ ಮೆಹಂದಿ ಅಲಂಕಾರ ಹೆಚ್ಚು ಮೆರುಗು ನೀಡುವುದಂತೂ ಸುಳ್ಳಲ್ಲ. ಇತ್ತೀಚಿನ ದಿನಗಳಲ್ಲಿ ಮೆಹಂದಿ ಹಾಕುವುದೂ ಕೂಡ ಒಂದು ರೀತಿಯ ಉದ್ಯಮವಾಗಿಬಿಟ್ಟಿದೆ. ಕೈಗೆ ಮಾತ್ರ ಆದರೆ ಇಷ್ಟು ರೇಟ್, ಕಾಲಿಗೂ ಮೆಹಂದಿ ಬೇಕೆಂದರೆ ಒಂದು ರೇಟ್.
ಇನ್ನು ಈಗ ಫಾಸ್ಟ್ ಮೆಹಂದಿ, ಸ್ಟಿಕರ್ ಮೆಹಂದಿ ಎಂದು ಅದರಲ್ಲೂ ಹಲವು ವಿಧಗಳೂ ಹುಟ್ಟಿಕೊಂಡಿವೆ. ಈ ಮೆಹಂದಿಯನ್ನು ಹಾಕಿದ ಮೇಲೆ ಹೆಚ್ಚು ಕೆಂಪಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದರಲ್ಲೂ ಮದುಮಗಳ ಮೆಹಂದಿ ಕೆಂಪಾದಷ್ಟು ಗಂಡನಾಗುವವನು ಅಷ್ಟು ಜಾಸ್ತಿ ಪ್ರೀತಿ ಮಾಡುತ್ತಾನಂತೆ ಎಂದು ರೇಗಿಸುವ ಮಾತುಗಳೂ ಕೂಡ ರೂಢಿಯಲ್ಲಿದೆ. ಹಾಗಾದರೆ ಈ ಮೆಹಂದಿ ಕೈಗೆ ಹಾಕಿದ ಮೇಲೆ ಹೆಚ್ಚು ಕೆಂಪಗಾಗಲು ಏನು ಮಾಡಬೇಕು.
ಮನೆಯಲ್ಲಿಯೇ ಯಾವೆಲ್ಲಾ ವಿಧಾನಗಳನ್ನು ಅನುಸರಿಸಿದರೆ ಕೈಗೆ ಹಾಕಿದ ಚೆಂದದ ಮೆಹಂದಿ ಕೆಂಪನೆ ಬಣ್ಣ ಪಡೆಯಲು ಸಾಧ್ಯ ಎನ್ನುವ ಬಗ್ಗೆ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.
ಲಿಂಬು ಮತ್ತು ಸಕ್ಕರೆಯ ಮಿಶ್ರಣವನ್ನು ಹಚ್ಚಿದರೆ ಮೆಹಂದಿಯ ಬಣ್ಣ ಕೆಂಪಗಾಗುತ್ತದೆ ಎನ್ನುವುದು ಹಳೆಯ ಕಾಲದಿಂದಲೂ ರೂಢಿಯಲ್ಲಿದೆ. ಅದು ನಿಜ ಕೂಡ ಹೌದು. ಲಿಂಬು ಮತ್ತು ಸಕ್ಕರೆ ಮೆಹಂದಿಯ ಮೇಲೆ ಬಿದ್ದಾಗ ಅದು ಚರ್ಮವನ್ನು ಕೆಂಪಗಾಗಿಸುತ್ತದೆ. ಮೆಹಂದಿ ಹಚ್ಚಿದ ಮೇಲೆ ಎರಡು ಬಾರಿ ಇದನ್ನು ಹಚ್ಚಿದರೆ ಸಾಕು.
ಒಂದು ಸಣ್ಣ ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಕುದಿಯಲು ಇಡಿ. ಅದಕ್ಕೆ ಎರಡು ಮೂರು ಹನಿಗಳಷ್ಟು ಲಿಂಬು ರಸ ಹಾಕಿ. ನಂತರ ಅದು ಬಿಸಿ ಆರಿದ ಮೇಲೆ ಹತ್ತಿ ಉಂಡೆಯಿಂದ ಮೆಹಂದಿಯ ಮೇಲೆ ಸವರಿಕೊಳ್ಳಿ. ಇದರಿಂದ ನಿಮ್ಮ ಕೈಗಳಲ್ಲಿನ ಮೆಹಂದಿ ಕೆಂಪಗಾಗುತ್ತದೆ.
ಮೆಹಂದಿಯನ್ನು ಹಚ್ಚಿದ ಬಳಿಕ ಅದು ಸ್ಚಲ್ಪ ಒಣಗಿದ ಮೇಲೆ ಅದರ ಮೇಲೆ ತುಪ್ಪ ಹಚ್ಚಿಕೊಳ್ಳಿ. ಇದು ಕೂಡ ನಿಮ್ಮ ಮೆಹಂದಿಯನ್ನು ಕೆಂಪಗಾಗಿ ಕಾಣುವಂತೆ ಮಾಡುತ್ತದೆ. ಪರಿಣಾಮಕಾರಿಯಾದ ಈ ವಿಧಾನ ಸುಲಭ ಕೂಡ ಹೌದು.
ತುಪ್ಪವನ್ನು ಕೊಂಚ ಬಿಸಿಮಾಡಿಕೊಳ್ಳಿ. ಅಥವಾ ಕರಗಿದ ತುಪ್ಪ ಇದ್ದರೆ ಇನ್ನೂ ಒಳ್ಳೆಯದು. ಹತ್ತಿಯ ಉಂಡೆಯನ್ನು ತುಪ್ಪದಲ್ಲಿ ನೆನೆಸಿ ಕೈಗೆ ಹಚ್ಚಿಕೊಳ್ಳಿ.
ಅದು ಆರುವವರೆಗೆ ಬಿಡಿ. ನಂತರ ಒಣಗಿದ ಮೆಹಂದಿಯನ್ನು ಟಿಶ್ಯೂವಿನಲ್ಲಿ ಒರೆಸಿ ತೆಗದುಕೊಳ್ಳಿ. ಮೆಹಂದಿ ಕೆಂಪಾಗಲು ಸಾಂಬಾರು ಪದಾರ್ಥಗಳೂ ಕೂಡ ನೆರವಾಗುತ್ತದೆ. ಹೌದು ಲವಂಗವನ್ನು ಮೆಹಂದಿಯ ಬಣ್ಣ ಕೆಂಪಗಾಗಲು ಬಳಸಲಾಗುತ್ತದೆ. ಇದು ಮೆಹಂದಿ ಹೆಚ್ಚು ದಿನಗಳ ಕಾಲ ಉಳಿಯುವಂತೆ ಕೂಡ ಮಾಡುತ್ತದೆ.
ಒಂದು ಬಾಣಲೆಯ ಮೇಲೆ ಆರೇಳು ಲವಂಗವನ್ನು ಇಟ್ಟು ಬಿಸಿ ಮಾಡಿ. ನಂತರ ಕೈಗಳನ್ನು ಬಾಣಲೆಯಿಂದ ಬರುತ್ತಿರುವ ಲವಂಗದ ಸುವಾಸನೆಯುಕ್ತ ಹೊಗೆ ತಾಗುವಂತೆ ಹಿಡಿದುಕೊಳ್ಳಿ.
ಎಷ್ಟು ಬಿಸಿ ತಾಗುವವರೆಗೆ ಹಿಡಿದುಕೊಳ್ಳಲು ಸಾಧ್ಯವೋ ಅಷ್ಟು ಹೊತ್ತು ಹಿಡಿದುಕೊಳ್ಳಿ. ನಂತರ ಕೈಗಳನ್ನು ನಿಧಾನಕ್ಕೆ ಉಜ್ಜಿ ಒಣಗಿದ ಮೆಹಂದಿಯನ್ನು ಉದುರಿಸಿಕೊಳ್ಳಿ. ಇದರಿಂದ ಚೆಂದದ ಡಿಸೈನ್ ಮೆಹಂದಿ ಕೆಂಪಗಾಗಿ ಕಾಣುತ್ತದೆ
ಮೆಹಂದಿಯ ಬಣ್ಣ ಕೆಂಪಗಾಗಲು ವಿಕ್ಸ್ ಉತ್ತಮ ಮನೆಮದ್ದಾಗಿದೆ. ಕೈಗೆ ಮೆಹಂದಿ ಹಚ್ಚಿದ ನಂತರ ಅದು ಆರಿದ ಮೇಲೆ ವಿಕ್ಸ್ ವೆಪೊರ್ ರಬ್ ಅಥವಾ ಟೈಗರ್ ಬಾಮ್ ಅನ್ನು ಕೈಗೆ ಹಚ್ಚಿಕೊಳ್ಳಿ. ಇದು ನಿಮ್ಮ ಕೈಯಲ್ಲಿನ ಮೆಹಂದಿ ಸೌಂದರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಹೆಚ್ಚು ದಿನ ಮೆಹಂದಿ ಕೆಂಪಗಾಗಿ ಉಳಿಯುವಂತೆ ಮಾಡುತ್ತದೆ.
ಮೆಹಂದಿ ಕೆಂಪಾಗಬೇಕೆಂದರೆ ಮೆಹಂದಿ ಹಚ್ಚುವ ಮೊದಲು ಚೆನ್ನಾಗಿ ಕೈ ತೊಳೆದುಕೊಳ್ಳಿ. ಇದರಿಂದ ಕೈಗೆ ನೀಟಾಗಿ ಮೆಹಂದಿ ಅಂಟಿಕೊಳ್ಳುತ್ತದೆ. ಇದರಿಂದ ಮೆಹಂದಿಯ ಡಿಸೈನ್ ಕೂಡ ಅಂದವಾಗಿ ಮೂಡಿಬರುತ್ತದೆ. ಇನ್ನು ಒಂದು ಬಾರಿ ಮೆಹಂದಿ ಹಂಚಿಕೊಂಡ ಮೇಲೆ ಕನಿಷ್ಷ 6 ರಿಂದ 8 ಗಂಟೆಗಳ ಕಾಲ ಇಟ್ಟುಕೊಳ್ಳಬೇಕು. 12 ಗಂಟೆಗಳ ಕಾಲ ಇಟ್ಟುಕೊಂಡರೆ ಇನ್ನೂ ಒಳ್ಳೆಯದು.
ಮೆಹಂದಿ ಹೆಚ್ಚು ಕೆಂಪಗಾಗಿ ಕಾಣಬೇಕೆಂದರೆ ಹೆಚ್ಚು ಹೊತ್ತು ಕೈಮೇಲೆ ಇದ್ದರೆ ಒಳ್ಳೆಯದು. ಸಂಪೂರ್ಣವಾಗಿ ಮೆಹಂದಿ ಒಣಗಿದ ಮೇಲೆ ಎರಡೂ ಕೈಗಳನ್ನು ಚೆನ್ನಾಗಿ ಉಜ್ಜಿ ಅದರನ್ನು ಬಿಡಿಸಿಕೊಳ್ಳಿ. ಇನ್ನು ಕಾಲುಗಳಲ್ಲಿರುವ ಮೆಹಂದಿಯನ್ನು ಟಿಶ್ಯೂ ಪೇಪರ್ ಸಹಾಯದಿಂದ ಒರೆಸಿಕೊಳ್ಳಬಹುದು. ನೆನಪಿಡಿ ಮೆಹಂದಿ ತೆಗೆಯುವಾಗ ಸೋಪ್ ಅಥವಾ ಹ್ಯಾಂಡ್ ವಾಷ್ ಬಳಸಿ ಅಥವಾ ನೀರನ್ನು ಹಾಕಿ ಕೈತೊಳೆಯಬೇಡಿ.