ಬೆಂಗಳೂರು: ಒಂದು ಸರಕಾರ ಗರಿಷ್ಠ ಪ್ರಮಾಣದ ಕೆಲಸ ಮಾಡಿದ್ದರೆ ಅದು ನರೇಂದ್ರ ಮೋದಿಯವರ ಸರಕಾರ ಎನ್ನಲು ನನಗೆ ಅತ್ಯಂತ ಹೆಮ್ಮೆ ಇದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸುನೀಲ್ ಕುಮಾರ್ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯ ಪ್ರಕೋಷ್ಠಗಳ ಸಭೆಯಲ್ಲಿ ಮಾತನಾಡಿದ ಅವರು, 2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಎಲ್ಲರ ಮನೆಗಳಿಗೆ ದೀನದಯಾಳ್ ಉಪಾಧ್ಯಾಯ ಯೋಜನೆಯಡಿ ವಿದ್ಯುತ್ ಕೊಡುವುದಾಗಿ ಹೇಳಿದ್ದರು. ಸ್ವಾತಂತ್ರ್ಯಾನಂತರ ಯಾರೂ ಇಂಥ ಘೋಷಣೆ ಮಾಡಿರಲಿಲ್ಲ. 2018ರೊಳಗೆ ಇಡೀ ದೇಶದ ಎಲ್ಲ ಗ್ರಾಮಗಳು, ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟು ಅವರು ಯಶಸ್ಸನ್ನು ಕಂಡರು ಎಂದು ವಿವರಿಸಿದರು.
ಅದಾದ ಬಳಿಕ ಮಹಿಳೆಯರ ಆರೋಗ್ಯ ಮತ್ತು ಮಹಿಳೆಯರಿಗೆ ಸುಲಭ ಆಗಬೇಕೆಂಬ ದೃಷ್ಟಿಯಿಂದ ಎಲ್ಲ ಮನೆಗೂ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಒದಗಿಸುವುದಾಗಿ ಹೇಳಿದರು. ಉಜ್ವಲ ಯೋಜನೆಯಡಿ 12 ಕೋಟಿಗೂ ಹೆಚ್ಚು ಮನೆಗಳಿಗೆ ಗ್ಯಾಸ್ ಸಂಪರ್ಕ ಕೊಡಲಾಯಿತು. ಕೋವಿಡ್ ಸಂದರ್ಭದಲ್ಲಿ ಎಲ್ಲ ವ್ಯಕ್ತಿಗಳಿಗೆ ಲಸಿಕೆ ಕೊಡುವುದಾಗಿ ಘೋಷಿಸಿದ ಪ್ರಧಾನಮಂತ್ರಿಗಳು, 150 ಕೋಟಿಗೂ ಹೆಚ್ಚು ಲಸಿಕೆ ನೀಡುವ ಮೂಲಕ ಪರಿಣಾಮಕಾರಿ ಆಡಳಿತ ನೀಡಿದ್ದಾರೆ ಎಂಬುದನ್ನು ನೀವು ಗಮನಿಸಿದ್ದೀರಿ ಎಂದು ತಿಳಿಸಿದರು.
2018ರ ಚುನಾವಣೆ ವೇಳೆ 2024ರ ಹೊತ್ತಿಗೆ ಮನೆಮನೆಗೂ ಕುಡಿಯುವ ನೀರು ಒದಗಿಸುವುದಾಗಿ ಹೇಳಿದ್ದರು. ಯಾವ ರಾಜಕಾರಣಿಯೂ ಈ ರೀತಿ ಯೋಚಿಸಲು ಸಾಧ್ಯವಿಲ್ಲ. ಸ್ವಜಲ- ಜಲಜೀವನ್ ಯೋಜನೆ ಮುಖಾಂತರ ಎಲ್ಲ ಮನೆಮನೆಗೆ ಕುಡಿಯುವ ನೀರು ಕೊಡುವ ದೊಡ್ಡ ಕಾರ್ಯವನ್ನು ಮೋದಿಯವರು ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಘೋಷಣೆಗಳು ಕೇವಲ ದೆಹಲಿಗೆ ಸೀಮಿತವಾಗಲಿಲ್ಲ. ಆ ಯೋಜನೆ ಪರಿಣಾಮಕಾರಿಯಾಗಿ ಕಟ್ಟಕಡೆಯ ವ್ಯಕ್ತಿಗೂ ತಲುಪುವಂಥ ಆಡಳಿತವನ್ನು ನರೇಂದ್ರ ಮೋದಿಯವರು ನೀಡಿದ್ದಾರೆ. ಆ ನರೇಂದ್ರ ಮೋದಿಯವರ ಆಡಳಿತ ಮತ್ತೊಮ್ಮೆ ಬರಲು ದೇಶದ ಜನರು ಕಾಯುತ್ತಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.
ಒಂದು ದಾಖಲೆಯ ವಿಜಯಕ್ಕಾಗಿ ನಾವೆಲ್ಲರೂ ಸಕ್ರಿಯರಾಗಬೇಕಿದೆ ಎಂದ ಅವರು, ನಾವೆಲ್ಲರೂ ಮೋದಿಯವರ ಸಾಧನೆಯ ಜೊತೆಗೇ ರಾಜ್ಯದ ಕಾಂಗ್ರೆಸ್ ಸರಕಾರದ 10 ತಿಂಗಳ ವೈಫಲ್ಯವನ್ನೂ ಜನತೆಗೆ ತಿಳಿಸಬೇಕಿದೆ. ಗ್ಯಾರಂಟಿ ಯೋಜನೆಗಳು ಬೇಕು; ಅದನ್ನು ಇಲ್ಲ ಎನ್ನುತ್ತಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳೇ ಅಭಿವೃದ್ಧಿಯಲ್ಲ. ಗ್ಯಾರಂಟಿ ಕೊಡುತ್ತಿದ್ದೇವೆ ಎನ್ನುತ್ತಿದ್ದು, ಒಂದೇ ಒಂದು ಅಭಿವೃದ್ಧಿ ಚಟುವಟಿಕೆ ಮಾಡದ ರಾಜ್ಯ ಸರಕಾರ ಕರ್ನಾಟಕದ ಕಾಂಗ್ರೆಸ್ ಪಕ್ಷದ್ದು ಎಂದು ಟೀಕಿಸಿದರು.
ಪ್ರಕೋಷ್ಠಗಳನ್ನು ಈಗ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ. ಪ್ರಕೋಷ್ಠಗಳಿಗೆ ದೊಡ್ಡ ಜವಾಬ್ದಾರಿ ಇದೆ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ನಡೆಯುವ ಈ ಸಭೆ ಗೆಲುವಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಎಂದು ನುಡಿದರು. ಜಿಲ್ಲೆಗಳಲ್ಲಿ ನಡೆಸುವ ಸಭೆಗಳು ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ, ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಪ್ರಮುಖರು ಭಾಗವಹಿಸಿದ್ದರು.
ನಾನು ಗೆಲ್ಲೋದು ಖಚಿತ, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟದಿಂದ ಕೆಳಗೆ ಇಳಿಯೋದು ನಿಶ್ಚಿತ- ಕೆ.ಎಸ್ ಈಶ್ವರಪ್ಪ
ನಾನು ‘ಅಂಗನವಾಡಿ ಕಾರ್ಯಕರ್ತೆ’ಯರ ಸಭೆ ನಡೆಸಿಲ್ಲ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ