ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಎನ್‌ಡಿಎ ಮೈತ್ರಿಕೂಟ ಗೆಲ್ಲಬೇಕು. ಆ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಕರೆಯಲಾಗಿದ್ದ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ನಮ್ಮ ಮುಖಂಡರ ಭಾವನೆಗಳನ್ನಷ್ಟೇ ನಾನು ಹೇಳಿದ್ದೇನೆ ಅಷ್ಟೇ. ಈ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚೆ ಮಾಡಿದ್ದೇನೆ. ನಾನು ಹೃದಯ ಶಸ್ತ್ರಚಿಕಿತ್ಸೆಗಾಗಿ ಚೆನ್ನೈಗೆ ಹೋಗುತ್ತಿದ್ದೇನೆ. ನಾನು ಬರುವವರೆಗೂ ಒಮ್ಮತವಾಗಿ ಮೈತ್ರಿ ಧರ್ಮಕ್ಕೆ ಬದ್ಧರಾಗಿ ಚುನಾವಣೆ ಕೆಲಸ ಮಾಡಿಕೊಂಡು ಹೋಗುವಂತೆ ನನ್ನ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ. ಅದೇ ರೀತಿ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಬಯಸುತ್ತೇನೆ ಎಂದು ತಿಳಿಸಿದರು.
ಒಂದು ವಾರದಲ್ಲಿ ನಾನು ವಾಪಸ್ ಬರುತ್ತೇನೆ. ನಮ್ಮ ಮೂರು ಕ್ಷೇತ್ರಗಳಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವಂತೆ ಕೋರಿದ್ದೇನೆ. ಯಾರೂ ಸಮಯ ವ್ಯರ್ಥ ಮಾಡಬಾರದು. ಆಸ್ಪತ್ರೆಯಿಂದ ಬಂದ ಕೂಡಲೇ ನಾನು ಮಂಡ್ಯದಿಂದ ಸ್ಪರ್ಧೆ ಮಾಡುತ್ತೇನೆಯೋ ಇಲ್ಲವೋ ಎಂಬುದನ್ನು ತಿಳಿಸುತ್ತೇನೆ. ನನ್ನ ಪ್ರಕಾರ ಮಂಡ್ಯ ಸೇರಿ ನಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರೇ ಅಭ್ಯರ್ಥಿಗಳು. ಪಕ್ಷವನ್ನು, ಕಾರ್ಯಕರ್ತರನ್ನು ಗೆಲ್ಲಿಸವುದಕಾಗಿ ಎಲ್ಲರೂ ಒಮ್ಮತವಾಗಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಾನು ಆಸ್ಪತ್ರೆಗೆ ದಾಖಲಾಗುವ ಮುನ್ನ ಇಷ್ಟು ವಿಷಯಗಳನ್ನು ಕಾರ್ಯಕರ್ತರಿಗೆ ಹೇಳಬೇಕಿತ್ತು. ಅದನ್ನು ನಿಮ್ಮ (ಮಾಧ್ಯಮಗಳು) ಮೂಲಕ ಅವರಿಗೆ ಹೇಳುತ್ತಿದ್ದೇನೆ ಎಂದ ಅವರು; ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಕೋಲಾರ ಕ್ಷೇತ್ರದ ಬಗ್ಗೆ ಗೊಂದಲ ನಿವಾರಣೆ ಆಗಿದೆ. ಆಸ್ಪತ್ರೆಯಿಂದ ಬಂದ ಕೂಡಲೇ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮಂಡ್ಯ ಜಿಲ್ಲೆಯ ಕಾರ್ಯಕರ್ತರು ನಿರಾಶೆ ಪಡಬೇಕಿಲ್ಲ. ಅವರಿಗೆ ಒಪ್ಪಿಗೆಯಾಗುವ ಒಳ್ಳೆಯ ನಿರ್ಧಾರವನ್ನೇ ಪ್ರಕಟಿಸುತ್ತೇನೆ. ಇಂದಿನಿಂದಲೇ ಎಲ್ಲರೂ ಚುನಾವಣೆ ಕೆಲಸ ಶುರು ಮಾಡಬೇಕು ಎಂದು ಮಂಡ್ಯ ಕಾರ್ಯಕರ್ತರಿಗೆ ಕರೆ ನೀಡಿದರು.