ಬೆಂಗಳೂರು : ಬಿಟ್ ಕಾಯಿನ್ ಕೇಸ್ನ DySP ಶ್ರೀಧರ್ ಪೂಜಾರ್ 5ನೇ ಆರೋಪಿಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡಿದರೆ ಅಥವಾ ಹಿಡಿದುಕೊಟ್ಟವರಿಗೆ ಬಹುಮಾನ ಮತ್ತು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು.ಆರೋಪಿ ಡಿವೈಎಸ್ಪಿ ಶ್ರೀಧರ್ ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಧರ್ ಪೂಜಾರ್ ಇತ್ತೀಚೆಗೆ ಜಾಮೀನು ಅರ್ಜಿ ಹಾಕಿದ್ದರು. ಆದರೆ, ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಜಾಮೀನು ವಜಾ ಮಾಡಿದ ಹಿನ್ನಲೆ ಪ್ರಮುಖ ಆರೋಪಿಯ ಬಂಧನಕ್ಕೆ ಎಸ್.ಐ.ಟಿ ತಂಡ ಹೋಗಿದ್ದರು. ಈ ಸಂದರ್ಭದಲ್ಲಿ ಪೊಲೀಸರ ವಾಹನಕ್ಕೆ ಗುದ್ದಿ ಎಸ್ಕೇಪ್ ಆಗಿದ್ದಾರೆ.
ಈಗಾಗಲೇ ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.ಇನ್ನು ಶ್ರೀಧರ್ ಪೂಜಾರ್ ವಿರುದ್ಧ 307 ಕೊಲೆ ಯತ್ನ, 353 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಿಸಲಾಗಿದೆ.
ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಸಿಐಡಿಯ ವಿಶೇಷ ತನಿಖಾ ದಳ ಚುರುಕುಗೊಳಿಸಿದೆ. ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಎಸ್ಐಟಿ ದಾಳಿ ನಡೆಸಿ ಪ್ರಮುಖ ಆರೋಪಿಗಳಾದ ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸಿದ್ಧ್ ಅವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು. ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದ ಸಿಐಡಿ ತಂಡ ಜಯನಗರದಲ್ಲಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು.