ನವದೆಹಲಿ: ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೊದಲ ಎರಡು ಪಟ್ಟಿಗಳಲ್ಲಿ ಕಾಣಿಸಿಕೊಂಡ 267 ಅಭ್ಯರ್ಥಿಗಳ ಪೈಕಿ 65 ಹಾಲಿ ಸಂಸದರಿಗೆ ಕೊಕ್ ನೀಡಲಾಗಿದೆ.
ಮಾರ್ಚ್ 2 ರಂದು ಬಿಡುಗಡೆಯಾದ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಜ್ಞಾ ಠಾಕೂರ್, ರಮೇಶ್ ಬಿಧುರಿ ಮತ್ತು ಮೀನಾಕ್ಷಿ ಲೇಖಿ ಸೇರಿದಂತೆ 33 ಸಂಸದರನ್ನು ಹೊಸ ಮುಖಗಳಿಂದ ಬದಲಾಯಿಸಲಾಗಿದ್ದರೆ, ಕೇಂದ್ರ ಸಚಿವ ದರ್ಶನ ಜರ್ದೋಶ್ ಮತ್ತು ಮಾಜಿ ಸಚಿವರಾದ ಸದಾನಂದ ಗೌಡ ಮತ್ತು ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಸೇರಿದಂತೆ 32 ಸಂಸದರನ್ನು ಮಾರ್ಚ್ 13 ರಂದು ಬಿಡುಗಡೆಯಾದ 72 ಹೆಸರುಗಳ ಎರಡನೇ ಪಟ್ಟಿಯಲ್ಲಿ ಬದಲಾಯಿಸಲಾಗಿದೆ.
ಕರ್ನಾಟಕ ಪಟ್ಟಿಯಲ್ಲಿರುವ 20 ಅಭ್ಯರ್ಥಿಗಳ ಪೈಕಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್, ಎರಡು ಬಾರಿ ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ 9 ಸಂಸದರನ್ನು ಬದಲಾಯಿಸಲಾಗಿದೆ. ಸಂಸತ್ತಿನ ಭದ್ರತಾ ಉಲ್ಲಂಘನೆ ವಿವಾದದಲ್ಲಿ ಸಿಂಹ ಅವರ ಹೆಸರು ಕೇಳಿಬಂದಿದ್ದು, ಅವರ ಸ್ಥಾನಕ್ಕೆ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.