ಬೆಂಗಳೂರು: ಇಂದು ಕರಾರಸಾ ನಿಗಮದ ಕೇಂದ್ರ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ, ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ನಿಗಮದ ತಾಂತ್ರಿಕ ಸಿಬ್ಬಂದಿಗಳು ಪುರುಷ ಸಿಬ್ಬಂದಿಗಳಷ್ಟೇ ಹೆಚ್ಚಿನ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಹಿಸಿ, ವಾಹನಗಳ ಪುನಃಶ್ಚೇತನ ಕಾರ್ಯದಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನೀಯ, ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಲಾಗುತ್ತಿದೆ, ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕಿಯರಿಗೂ ಕೂಡ ಮಾರ್ಗ ನಿಯೋಜನೆಯಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮಹಿಳಾ ಸಮಾನತೆ , ಸಬಲೀಕರಣ ಎಂಬುದನ್ನು ನಮ್ಮಲ್ಲಿ ಅಕ್ಷರಶಃ ಕಾಣಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಗೌರಿ ನಾಯಕ್ ರವರ ಸಮಾಜಮುಖಿ ಸೇವೆಯನ್ನು ಪ್ರಶಂಸಿಸಿ, ಇದೇ ರೀತಿಯಲ್ಲಿ ಅವರು ಕಾರ್ಯವನ್ನು ಮುಂದುವರೆಸಲು ದೇವರು ಶಕ್ತಿ ಮತ್ತು ಆಯಸ್ಸನ್ನು ನೀಡುವಂತೆ ಹಾರೈಸಿದರು. ಅಂಗನವಾಡಿ ಆವರಣದಲ್ಲಿ ಅವರು ತೆರೆದಿರುವ ಬಾವಿಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುತ್ತಲು ಕಟ್ಟೆಯನ್ನು ನಿರ್ಮಿಸುವ ಸಲುವಾಗಿ ನಿಗಮದ ವತಿಯಿಂದ ರೂ.1 ಲಕ್ಷವನ್ನು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದರು
ವಿ. ಅನ್ಬುಕುಮಾರ್, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಪ್ರಸ್ತುತ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಅಭಿವೃದ್ದಿ ಹೊಂದುತ್ತಿರುವುದು ಸ್ವಾಗತಾರ್ಹ. ತಮ್ಮ ತಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಬ್ಯಾಸವನ್ನು ದೊರಕಿಸಿಕೊಟ್ಟು, ಸಬಲರನ್ನಾಗಿ ಮಾಡಬೇಕು ಎಂದು ತಿಳಿಸಿದರು. ಶಿಕ್ಷಣ ಒಂದೇ ಮಹಿಳೆಯರನ್ನು ಮತ್ತಷ್ಟು ಎತ್ತರಕ್ಕೆ ಕೊಂಡ್ಯೊಯಲು ಸಾಧನವಾಗಿದೆ ಎಂದು ತಿಳಿಸಿದರು.
ನಿಗಮದ ವಿವಿಧ ಹುದ್ದೆಗಳಲ್ಲಿ ಒಟ್ಟಾರೆ 3068 ಮಹಿಳಾ ಉದ್ಯೋಗಿಗಳು (ಚಾಲಕ ಕಂ ನಿರ್ವಾಹಕರು 26, ನಿರ್ವಾಹಕರು 700, ತಾಂತ್ರಿಕ ಸಿಬ್ಬಂದಿಗಳು 971, ಭದ್ರತಾ ಸಿಬ್ಬಂದಿಗಳು-84, ಆಡಳಿತ ಸಿಬ್ಬಂದಿಗಳು-1210 ಹಾಗೂ ಅಧಿಕಾರಿಗಳು-77) ಪುರುಷ ಕಾರ್ಮಿಕರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಗಮವು ಎಲ್ಲಾ ರೀತಿಯಲ್ಲಿಯೂ ಅವರನ್ನು ಗೌರವಿಸಿ, ಪ್ರೋತ್ಸಾಹಿಸುತ್ತಿದ್ದು ಈ ಕೆಳಕಂಡ ಕಲ್ಯಾಣ ಕಾರ್ಯಕ್ರಮವನ್ನು ರೂಪಿಸಲಾಗಿರುತ್ತದೆ.
- ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳಾ ನೌಕರರಿಗೆ ಆಗುವ ಲೈಂಗಿಕ ಕಿರುಕುಳವನ್ನು ತಡೆಯಲು Sexual Harassment of Women at Workplace (Prevention, Prohibition & Redressal) Act-2013 ರನ್ವಯ ಮಹಿಳಾ ನೌಕರರ ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದೆ, ಲಿಂಗ ಸಂವೇದಿ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.
- ಗರ್ಭಿಣಿ ಮಹಿಳಾ ನಿರ್ವಾಹಕಿ/ ಚಾಲಕಿ/ ಚಾಲಕ-ಕಂ-ನಿರ್ವಾಹಕಿ/ ತಾಂತ್ರಿಕ ಸಿಬ್ಬಂದಿ/ಮಾರ್ಗ ತನಿಖಾ ಸಿಬ್ಬಂದಿಗಳು ಅವರ ಹುದ್ದೆಯ ಕರ್ತವ್ಯ ನಿರ್ವಹಿಸುವುದು ಮಗುವಿನ ಮತ್ತು ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ ಸೂಕ್ತವಲ್ಲದ ಕಾರಣ 3, 4, 5 ಮತ್ತು 6ನೇ ತಿಂಗಳ ಅವಧಿಯಲ್ಲಿ ಅವರನ್ನು ಲಘು ಕರ್ತವ್ಯದ ಮೇಲೆ ನಿಯೋಜಿಸಲಾಗುತ್ತಿದೆ.
- ಮಹಿಳಾ ನೌಕರರಿಗೆ ರಾಜ್ಯ ಸರ್ಕಾರದ ಮಾದರಿಯಲ್ಲಿ 180 ದಿನಗಳ ಹೆರಿಗೆ ರಜೆಯನ್ನು ನೀಡಲಾಗುತ್ತಿದೆ.
- ಸರ್ಕಾರದ ಮಾದರಿಯಲ್ಲಿ ಕಿರಿಯ ಮಗುವಿಗೆ 18 ವರ್ಷ ತಲುಪುವವರೆಗೆ ಒಟ್ಟು ಸೇವಾವಧಿಯಲ್ಲಿ ಗರಿಷ್ಠ ಆರು ತಿಂಗಳವರೆಗೆ (180 ದಿನಗಳ) “ಶಿಶುಪಾಲನಾ ರಜೆ” ಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
- ಮಹಿಳಾ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಗುವಿಗೆ ಮೂರು ವರ್ಷ ತುಂಬುವವರೆಗೆ ರೂ.1250/- ಗಳನ್ನು ಮಾಸಿಕ ಶಿಶು ಪಾಲನಾ ಭತ್ಯೆ ನೀಡಲಾಗುತ್ತಿದೆ.
- ಬುದ್ದಿಮಾಂದ್ಯ/ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ನೌಕರರಿಗೆ ಒಟ್ಟು 730 ದಿವಸಗಳ “ಶಿಶು ಪಾಲನಾ ರಜೆ”ಯನ್ನು ವೇತನಸಹಿತವಾಗಿ ನೀಡಲಾಗುತ್ತಿದೆ.
- ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಾಸಿಯಾದ ಗೌರಿ ನಾಯಕ್ ರವರನ್ನು ಗೌರವಿಸಿ, ಗೌರವಧನ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು*. ಇವರು ತಮಗೆ ಜೀವನಾಧಾರವಾಗಿದ್ದ ತೋಟಕ್ಕೆ ನೀರಿಲ್ಲದ ಸಮಯದಲ್ಲಿ ಎದೆಗುಂದದ ಛಲದಿಂದ ತಮ್ಮ ತೋಟದಲ್ಲಿ 75 ಅಡಿ ಆಳದ ಬಾವಿ ತೆಗೆದು ನೀರಿನ ಆಧಾರ ಮಾಡಿಕೊಂಡಿದ್ದಾರೆ. ಇದುವರೆಗೂ ಮೂರು ಬಾವಿಯನ್ನು ಏಕಾಂಗಿಯಾಗಿ ತೆಗೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
ಅಂಗನವಾಡಿಯ ಮಕ್ಕಳ ಉಪಯೋಗಕ್ಕಾಗಿ ಮೂರನೆಯ ಬಾವಿ ತೆರೆದ ಸಾಧಕಿ ಈಕೆ! ಅಂಗನವಾಡಿ ಆವರಣದಲ್ಲಿ ಶಾಲೆಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಮನೆಗಳಿಗೂ ಸಹ ನೀರು ದೊರಕಿಸುವಂತೆ ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗೌರಿ ನಾಯಕ್ ರವರು ತಮ್ಮ ಸೇವೆಯನ್ನು ಗುರುತಿಸಿ ನಿಗಮವು ಸನ್ಮಾನ ಮಾಡುತ್ತಿರುವುದು ತಮಗೆ ಹರ್ಷವನ್ನು ಉಂಟು ಮಾಡಿದ್ದು, ಇದು ತಮ್ಮನ್ನು ಈ ರೀತಿಯ ಸಮಾಜ ಮುಖಿ ಸೇವೆಯಲ್ಲಿ ಮುಂದುವರೆಯಲು ಪ್ರೇರಣೆಯಾಗಿರುವುದಾಗಿ ತಿಳಿಸಿದರು.
ಇಂದು ನಿಗಮದ 17 ವಿಭಾಗಗಳಲ್ಲಿ ಉತ್ತಮ ಕಾರ್ಯ ಸಾಧನೆ ತೋರಿದ ನಿರ್ವಾಹಕಿಯರು, ತಾಂತ್ರಿಕ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ಪೈಕಿ ಒಟ್ಟು 41 ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಹಾಗೂ ಹಿರಿಯ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು.
BREAKING : ರಾಜಸ್ಥಾನದಲ್ಲಿ ವಾಯುಪಡೆಯ ‘ತೇಜಸ್ ವಿಮಾನ’ ಪತನ, ‘ಪೈಲಟ್’ ಸುರಕ್ಷಿತ
‘ನಮ್ಮ ಮೆಟ್ರೋ’ದಲ್ಲಿ ಬೆಚ್ಚಿ ಬೀಳಿಸೋ ಘಟನೆ: ‘ಅಪರಿಚಿತ ವ್ಯಕ್ತಿ’ ಓಡಾಟ, ಕೆಲಕಾಲ ‘ಸಂಚಾರ ಸ್ಥಗಿತ’