ಮಂಡ್ಯ: ಈಗ ನೆಂಟಸ್ತನ ಬೆಳೆಸಿರುವ ಜೆಡಿಎಸ್, ಬಿಜೆಪಿ ನಾಯಕರು ಒಂದು ದಿನವಾದರೂ ನಿಮ್ಮ ಪರವಾಗಿ ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಿದ್ದಾರಾ? ದೇವೇಗೌಡರು ಈಗ ಕಣ್ಣೀರು ಹಾಕುತ್ತಿದ್ದಾರೆ. ದೇವೇಗೌಡರ ಕಣ್ಣೀರು ಅವರ ಕುಟುಂಬಕ್ಕೆ ಸೀಮಿತವಾಯಿತೇ ಹೊರತು ಬಡ ಜನರಪರವಾಗಿ ಇಲ್ಲ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದಂತ ಅವರು, ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ವಿದ್ಯುತ್ ಉಚಿತ, ಗೃಹಲಕ್ಷ್ಮೀ ಯೋಜನೆ ಮೂಲಕ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ ಅಕ್ಕಿ ಅದರಲ್ಲಿ 5 ಕೆ.ಜಿ ಅಕ್ಕಿಯ ಹಣ, ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದರು.
ಇಲ್ಲಿರುವ ತಾಯಂದಿರಿಗೆ 2 ಸಾವಿರ ಹಣ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಅಕ್ಕಿ ಹಾಗೂ ಹಣ ಸಿಗುತ್ತಿದೆಯಲ್ಲವೆ? ಮಂಡ್ಯದಲ್ಲಿ 97% ರಷ್ಟು ಮನೆಗಳು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿವೆ. ಇವರಿಗೆ ಶೂನ್ಯ ಬಿಲ್ ಸಿಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಕೊಟ್ಟಿದ್ದರೆ? ಎಂದು ಪ್ರಶ್ನಿಸಿದರು.
ಚುನಾವಣೆಗೂ ಮುನ್ನ ಒಂದು ಮಾತು ಹೇಳುತ್ತಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದರು.
ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು. ಕುಮಾರಣ್ಣ ತೆನೆ ಹೊತ್ತ ಮಹಿಳೆಯನ್ನು ನೂಕಿ ಕಮಲದ ಹಿಡಿದರು. ಐದು ವ್ಯಾ ಎಂಟಿ ಸೇರಿ ಕೈ ಗಟ್ಟಿಯಾಯಿತು. ಕರ್ನಾಟಕ ರಾಜ್ಯ ಸಮೃದ್ಧಿಯಾಯಿತು. ಕರ್ನಾಟಕ ರಾಜ್ಯ ಪ್ರಬುದ್ಧವಾಯಿತು.
ನಾವು ಜೀವನದಲ್ಲಿ ಯಶಸ್ಸು ಸಾಧಿಸಲು ಧರ್ಮರಾಯನ ಧರ್ಮತ್ವ ಇರಬೇಕು, ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ, ಕೃಷ್ಣನ ತಂತ್ರ ಇರಬೇಕು.
ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷವಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ. ನೀವೆಲ್ಲ ಸೇರಿ ದಿನೇಶ ಗೂಳಿಗೌಡ, ಮಧು ಮಾದೇಗೌಡ ಅವರನ್ನು ಪರಿಷತ್ ಸದಸ್ಯರನ್ನಾಗಿ, 6 ಶಾಸಕರನ್ನು ಆಯ್ಕೆ ಮಾಡಿದಿರಿ. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನು ಬೇಕು.
ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರ ಇತ್ತು. ಆದರೆ ನಾವು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಕಾವೇರಿ ಭಾಗದಲ್ಲಿ ಕೆರೆ ತುಂಬಿಸಲು ಕಾಲುವೆ ಅಭಿವೃದ್ಧಿಗೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇವೆ. ಕೆಆರ್ ಎಸ್ ಪ್ರವಾಸಿ ತಾಣ ಮಾಡಲು ಟೆಂಡರ್ ಕರೆಯಲಾಗಿದೆ.
ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಹೋರಾಟ ಮಾಡಿದ್ದೆ ನಿಮಗಾಗಿ. ಇದು ಕೇವಲ ಬೆಂಗಳೂರಿಗೆ ಮಾತ್ರ ಪ್ರಯೋಜನವಲ್ಲ. ಅಲ್ಲಿ 64 ಟಿಎಂಸಿ ನೀರು ಇದ್ದರೆ, ಸಂಕಷ್ಟದ ಸಮಯದಲ್ಲಿ ಅಲ್ಲಿಂದ ತಮಿಳುನಾಡಿಗೆ ನೀರು ಬಿಟ್ಟು ಕೆಆರ್ ಎಸ್, ಕಬಿನಿ, ಹಾರಂಗಿಯ ನೀರನ್ನು ಈ ಭಾಗದ ಜನರ ಬಳಕೆಗೆ ನೀಡಬಹುದು.
ನಾವು ತಮಿಳುನಾಡಿಗೆ ಬಗ್ಗಲಿಲ್ಲ. ನಮ್ಮ ರೈತರು ಬದುಕಿದ ನಂತರ ನಿಮಗೆ ನೀರು ಬಿಡುತ್ತೇವೆ ಎಂದು, ನಿಮ್ಮ ಬೆಳೆಗೆ ನೀರು ಹರಿಸಿದ ನಂತರ ತಮಿಳುನಾಡಿಗೆ ನೀರು ಬಿಟ್ಟೆವು. ನಾವು ನಿಮ್ಮ ಬೆಳೆಯನ್ನು ರಕ್ಷಣೆ ಮಾಡಿದ್ದೇವೆಯೇ ಇಲ್ಲವೇ ಎಂಬುದನ್ನು ನಿಮ್ಮ ಆತ್ಮಸಾಕ್ಷಿಯಿಂದ ಹೇಳಿ. ಕಷ್ಟ ಕಾಲದಲ್ಲೂ ನಿಮ್ಮ ಬೆಳೆ ಉಳಿಸಿದ್ದೇವೆ.
2019ರಲ್ಲಿ ‘ಮಂಡ್ಯ’ದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ‘ಕಾಂಗ್ರೆಸ್ ಪಕ್ಷ’ವೇ ಕಾರಣ – HDK