ಬೆಂಗಳೂರು : ರಾಜ್ಯ ಸರ್ಕಾರ ಸಮಗ್ರ ಕೃಷಿಗೆ ಒತ್ತು ನೀಡುತ್ತದೆ. ಹೈನುಗಾರಿಕೆ, ಮೀನುಗಾರಿಕೆ ತೋಟಗಾರಿಕೆ ಸೇರಿದಂತೆ ಬಹು ಕೃಷಿ ಪದ್ಧತಿ ರೂಢಿಸಿಕೊಂಡಾಗ ಮಾತ್ರ ರೈತರ ಆದಾಯ ಹೆಚ್ಚಲು ಸಾಧ್ಯ. ಅದೇ ರೀತಿ ಕೃಷಿ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು,”ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಕೆವಿಕೆ ಆವರಣದಲ್ಲಿ ಇಂಧನ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ರೈತ ಸೌರಶಕ್ತಿ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅತ್ಯಂತ ಸಂತೋಷದಿಂದ ಮೇಳ ಉದ್ಘಾಟಿಸಿದ್ದೇನೆ. ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ನೇತೃತ್ವದಲ್ಲಿ ರೈತ ಸೌರ ಶಕ್ತಿ ಮೇಳ ಏರ್ಪಾಡಾಗಿದೆ. ಸೌರ ಶಕ್ತಿ ಕ್ಷೇತ್ರದಲ್ಲಿ ಆಗಿರುವಂಥ ಬೆಳವಣಿಗೆ ರೈತರನ್ನು ತಲುಪಿ, ಕೃಷಿಯಲ್ಲಿ ಬಳಸಿಕೊಂಡಾಗ ಮಾತ್ರ ಅದು ಸಾರ್ಥಕವಾಗುತ್ತದೆ,”ಎಂದರು.
“ಕೃಷಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆಗಳಾಗಿ, ಅದು ರೈತರಿಗೆ ತಲುಪಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಎಲ್ಲ ಪ್ರದೇಶಗಳಿಗೆ ನೀರಾವರಿ ಒದಗಿಸಲು ಸಾಧ್ಯವಾಗದು. ರಾಜಸ್ಥಾನ ಹೊರತುಪಡಿಸಿದರೆ ಹೆಚ್ಚು ಒಣ ಭೂಮಿ ಇರುವುದು ಕರ್ನಾಟಕದಲ್ಲಿ. ರೈತರು ಇಂಥ ಭೂಮಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ಕೃಷಿ ಮಾಡುವಂತಾಗಬೇಕು. ಹೈನುಗಾರಿಕೆ, ಮೀನುಗಾರಿಕೆ ತೋಟಗಾರಿಕೆ ಸೇರಿದಂತೆ ಬಹು ಕೃಷಿ ಪದ್ಧತಿ ರೂಢಿಸಿಕೊಂಡಾಗ ಮಾತ್ರ ರೈತರ ಆದಾಯ ಹೆಚ್ಚಲು ಸಾಧ್ಯ. ಅದೇ ರೀತಿ ಕೃಷಿ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು,”ಎಂದು ಹೇಳಿದು.
“ಯುವಜನರು ಗ್ರಾಮಗಳನ್ನು ತೊರೆದು ನಗರಗಳನ್ನು ಸೇರುತ್ತಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ, ಅದನ್ನು ರೈತರು ಅಳವಡಿಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ. ನೀರಾವರಿಗೆ ನವೀಕರೀಸಬಹುದಾದ ಇಂಧನವನ್ನೂ ರೈತರು ಬಳಸಿಕೊಳ್ಳಬೇಕು,”ಎಂದು ಸಲಹೆ ನೀಡಿದರು.
ಮುಂದಿನ 7 ವರ್ಷಗಳಲ್ಲಿ 60,000 ಮೆಗಾವ್ಯಾಟ್ ಉತ್ಪಾದನೆಯ ಗುರಿ
“ನಮ್ಮ ಮೊದಲ ಅವಧಿಯ ಸರ್ಕಾರದಲ್ಲಿ ಎಲ್ಲಾ ಸಮಸ್ಯೆಗಳ ನಡುವೆಯೇ ವಿದ್ಯುತ್ ಉತ್ಪಾದನೆ ಪ್ರಮಾಣ ದುಪ್ಪಟ್ಟಾಗಿತ್ತು. ನಾವು ಅಧಿಕಾರಕ್ಕೆ ಬಂದ 2013 -14ರಲ್ಲಿ 14,048 ಮೆಗಾವ್ಯಾಟ್ ಉತ್ಪಾದನೆ ಆಗುತ್ತಿತ್ತು. 2017-18ರ ವೇಳೆಗೆ 27,780 ಮೆಗಾವ್ಯಾಟ್ಗೆ ಉತ್ಪಾದನೆ ಏರಿಕೆಯಾಗಿತ್ತು. ಇದೇ ರೀತಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿಕೊಂಡು ಬಂದಿದ್ದರೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯೇ ಎದುರಾಗುತ್ತಿರಲಿಲ್ಲ. ಕರ್ನಾಟಕದಲ್ಲಿ 32000 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ, ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ರಾಜ್ಯ ಸರಕಾರದ ದಿಟ್ಟ ಹೆಜ್ಜೆ ಇಟ್ಟಿದ್ದು, ಮುಂದಿನ 7 ವರ್ಷಗಳಲ್ಲಿ 60,000 ಮೆಗಾವ್ಯಾಟ್ ಉತ್ಪಾದನೆಯ ಗುರಿ ಹಾಕಿಕೊಂಡಿದ್ದೇವೆ. ಸದ್ಯ ನವೀಕರಿಸಬಹುದಾದದ ಇಂಧನದ ಪಾಲು ಶೇ.63ರಷ್ಟಿದೆ,”ಎಂದು ವಿವರಿಸಿದರು.
“ಇಡೀ ವಿಶ್ವದಲ್ಲೇ ಗಮನ ಸೆಳೆದ ಸೋಲಾರ್ ಪಾರ್ಕ್ ಅನ್ನು ತುಮಕೂರಿನ ಪಾವಗಡದಲ್ಲಿ ನಿರ್ಮಾಣ ಮಾಡಿದೆವು. ಡಿಕೆ ಶಿವಕುಮಾರ್ ಅವರು ಆಗ ಇಂಧನ ಸಚಿವರಾಗಿದ್ದರು. ರೈತರಿಂದ ಜಮೀನು ಖರೀದಿಸದೇ, ಅವರನ್ನು ಪಾರ್ಟನರ್ ಆಗಿ ಮಾಡಿ ಈ ಯೋಜನೆ ಮಾಡಿದ್ದು, ವಿಶ್ವಕ್ಕೆ ಮಾದರಿ ಆಗಿದೆ,”ಎಂದು ಸಿದ್ದರಾಮಯ್ಯ ತಿಳಿಸಿದರು.
ಮನೆ ಬೆಳಗಿದೆ ಗೃಹಜ್ಯೋತಿ
“ಸಾಮಾಜಿಕವಾಗಿ ದುರ್ಬಲವಾಗಿ ಇರುವವರಿಗೆ ಶಕ್ತಿ ತುಂಬುವ ಕೆಲಸ ಮಾಡಿದಾಗಷ್ಟೇ ಅಸಮಾನತೆ ತೊಲಗಿಸಲು ಸಾಧ್ಯ. ಇದು ಬಾಯಿ ಮಾತಿನಲ್ಲಿ ಹೇಳುವಂಥದ್ದಲ್ಲ, ಹಾಗಾಗಿಯೇ ನಮ್ಮ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರು, ಹಿಂದುಳಿದವರಿಗೆ ಶಕ್ತಿ ತುಂಬಬೇಕು. ಈ ದಿಶೆಯಲ್ಲಿ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಿದ್ದೇವೆ. ಈವರೆಗೆ ನೋಂದಣಿಗೊಂಡ ಒಟ್ಟು ಗ್ರಾಹಕರ ಸಂಖ್ಯೆ 1.67 ಕೋಟಿ , ಫಲಾನುಭವಿಗಳ ಒಟ್ಟು ಸಂಖ್ಯೆ – 1.60 ಕೋಟಿ. ಸರ್ಕಾರದಿಂದ ಒಟ್ಟು – 5,075 ಕೋಟಿ ರೂ. ಸಬ್ಸಿಡಿ ನೀಡುತ್ತಿದ್ದೇವೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿ ಮಾಡಿದ್ದೇವೆ. ಮನೆ ಒಡತಿಗೆ 2 ಸಾವಿರ ಕೊಡುತ್ತಿದ್ದೇವೆ. ಅನ್ನ ಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ 170 ರೂ. ನೀಡುತ್ತಿದ್ದೇವೆ. ಕೇಂದ್ರದವರು ಅಕ್ಕಿ ಕೊಡದಿದ್ದರೂ, ನಾವು ಯೋಜನೆ ಅನುಷ್ಠಾನಗೊಳಿಸಿದ್ದೇವೆ. ಯುವನಿಧಿ ಯೋಜನೆಯಡಿ ಈ ವರ್ಷದ ಪದವೀಧರರಿಗೆ ನಿರುದ್ಯೋಗ ಭತ್ಯ ನೀಡುತ್ತೇವೆ. ಜತೆಗೆ ಕೌಶಲ ಅಭಿವೃದ್ಧಿಗೂ ಒತ್ತು ನೀಡಿದ್ದೇವೆ,”ಎಂದು ಹೇಳಿದರು.
“ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ. ನಮ್ಮ ಸರ್ಕಾರ ಸದಾ ರೈತರ ಪರವಾಗಿದೆ. ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸೌರ ಪಂಪ್ ಸೆಟ್ ಅಳವಡಿಸಿಕೊಂಡು ಸ್ವಾಲಂಬಿಗಳಾಗಿ,”ಎಂದು ರೈತರಿಗೆ ಕರೆ ನೀಡಿದರು.
ನಮ್ಮ ಸಿಎಂ ದೇಶದಲ್ಲೇ ಫೇಮಸ್
ಮೇಳದಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್,” ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್ಸೆಟ್ ಬಳಕೆಯೇ ಪರಿಹಾರ. ಹಾಗಾಗಿ, ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ‘ರೈತ ಸೌರ ಶಕ್ತಿ ಮೇಳ’ಆಯೋಜಿಸಲಾಗಿದೆ,”ಎಂದರು.
“ಹೆಚ್ಚಿನ ಪ್ರಮಾಣದಲ್ಲಿ ಸೌರ ಪಂಪ್ ಸೆಟ್ ಅಳವಡಿಕೆಯನ್ನು ರೈತ ಸಮೂಹಗಳಲ್ಲಿ ಉತ್ತೇಜಿಸಲು ರಾಜ್ಯ ಸರ್ಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ 30 ರಷ್ಟು ಸಹಾಯಧನವನ್ನು ಶೇ 50 ಕ್ಕೆ ಹೆಚ್ಚಿಸಿದೆ. ಒಟ್ಟಾರೆ ಮೊತ್ತದಲ್ಲಿ ಶೇ 20 ರಷ್ಟನ್ನು ಮಾತ್ರ ರೈತರು ಭರಿಸಬೇಕಾಗಿರುತ್ತದೆ. ಇದಲ್ಲದೇ, ಯೋಜನೆಯಡಿ ರೈತರಿಗೆ ಪಂಪ್, ಮೀಟರ್, ಪೈಪ್ಗಳನ್ನು ಒದಗಿಸಲಿದೆ,”ಎಂದರು
“ರಾಜ್ಯದಲ್ಲಿ ಮಾತ್ರ ಅಲ್ಲ ನಮ್ಮ ಸಿಎಂ ಇಡೀ ದೇಶದಲ್ಲೇ ಅತ್ಯಂತ ಜನಪ್ರಿಯರು. ಅವರ ಸಲಹೆ ಮೇರೆಗೆ ರೈತರಿಗೆ 7 ತಾಸು ವಿದ್ಯುತ್ ನೀಡಲಾಯಿತು. ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬರ ಪರಿಸ್ಥಿತಿ ಎದುರಾಯಿತು. ಆಗಲೂ ನಾವು ಎದೆಗುಂದದೆ, ಅಗತ್ಯ ಕ್ರಮವಹಿಸಿದೆವು. ಅದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿಲ್ಲ,” ಎಂದು ಇಂಧನ ಸಚಿವರು ಹೇಳಿದರು.
“ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು. ಅದಕ್ಕಾಗಿ ನಮ್ಮ ಸರ್ಕಾರ ‘ಕುಸುಮ್ ಬಿ’ ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ. ನವೀನ ಮಾದರಿಯ ಸೌರ ಪಂಪ್ಸೆಟ್ಗಳ ಪ್ರಾತ್ಯಕ್ಷಿಕೆಯನ್ನು ನೋಡಿ, ಈ ವಿಚಾರವಾಗಿ ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮೇಳ ಅತ್ಯುತ್ತಮ ವೇದಿಕೆಯಾಗಲಿದೆ. ಸೌರ ಪಂಪ್ಸೆಟ್ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಅಳವಡಿಸಿಕೊಳ್ಳುವಂತಾಗಬೇಕು,”ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಸಿ. ಸುಧಾಕರ್, ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರರಾದ ಗೋವಿಂದರಾಜ್ ಹಾಗೂ ನಸೀರ್ ಅಹ್ಮದ್ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕ್ರೆಡಲ್ ಅಧ್ಯಕ್ಷರಾಗಿ ಟಿಡಿ ರಾಜೇಗೌಡ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಉಪಸ್ಥಿತರಿದ್ದರು.
ಮೇಳದ ಆಕರ್ಷಣೆ
• ರಾಜ್ಯದ ನಾನಾ ಭಾಗಗಳಿಂದ ಬರುವ ರೈತರಿಗೆ ಸೌರ ಪಂಪ್ಸೆಟ್ಗಳ ಬಗ್ಗೆ ಮಾಹಿತಿ ನೀಡಲು ಮೇಳದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸೌರ ವಿದ್ಯುತ್ ಉತ್ಪನ್ನಗಳ ಮಳಿಗೆಗಳಿದ್ದವು.
• ಸೌರ ಪಂಪ್ಸೆಟ್ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ನೇರವಾಗಿ ನೋಡಲು ಪ್ರಾತ್ಯಕ್ಷಿಕೆ ನೀಡಲಾಯಿತು.
• ಸೋಲಾರ್ ಪಂಪ್ಸೆಟ್ ಅಳವಡಿಕೊಳ್ಳುವ ರೈತರಿಗಾಗಿಯೇ ಆನ್ಲೈನ್ ಪೋರ್ಟಲ್ ವಿನ್ಯಾಸಗೊಳಿಸಲಾಗಿದೆ.ಈ ಮೂಲಕ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
• ರೈತರಿಗಾಗಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸೌರ ಪಂಪ್ ಸೆಟ್ಗಳ ಉತ್ಪಾದಕರು, ಮಾರಾಟಗಾರರು, ಬ್ಯಾಂಕ್ ಅಧಿಕಾರಿಗಳು, ಕೃಷಿ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.
ಕುಸುಮ್ ಬಿ
ಸಾಂಪ್ರದಾಯಿಕ ಗ್ರಿಡ್-ಆಧಾರಿತ ವಿದ್ಯುತ್ ಅವಲಂಬನೆಯನ್ನು ತಗ್ಗಿಸಲು, ರೈತರಿಗೆ ಸೌರ ಚಾಲಿತ ಪಂಪ್ಸೆಟ್ಗಳ ಬಳಕೆಗೆ ಒತ್ತು ನೀಡಲು ಸರ್ಕಾರ ರೈತರಿಗೆ ಸಬ್ಸಿಡಿ ನೀಡುತ್ತದೆ. ಕುಸುಮ್ ಬಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ 7.5 ಎಚ್.ಪಿ. ಸಾಮರ್ಥ್ಯದ ಸೌರ ಪಂಪ್ ಸೆಟ್ಗೆ ಶೇಕಡ 30 ಕೇಂದ್ರ ಸರ್ಕಾರದಿಂದ ಸಹಾಯಧನ ಒದಗಿಸುತ್ತದೆ. ರಾಜ್ಯದಿಂದ ನೀಡುತ್ತಿದ್ದ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಶೇ.50ಕ್ಕೆ ಏರಿಸಿದೆ. ಅಷ್ಟೇ ಅಲ್ಲ, ಯೋಜನೆಯಡಿ ಪಂಪ್, ಮೀಟರ್, ಪೈಪ್ಗಳನ್ನು ಒದಗಿಸುತ್ತಿದೆ.
ಸೌರ ಪಂಪ್ಸೆಟ್ಗಳ ಸ್ಥಾಪನೆ ಸುಲಭವಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿವಾಗುತ್ತಿದೆ. ಕುಸುಮ್ ಕಾಂಪೋನೆಂಟ್ – ಬಿ ಯೋಜನೆಯಡಿ ಸೌರ ಪಂಪ್ ಸೆಟ್ಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಮುಂದುವರಿಸಲಾಗಿದ್ದು, ರಾಜ್ಯದಲ್ಲಿ ಈವರೆಗೆ ಸುಮಾರು 7000 ಸೌರ ಪಂಪ್ ಸೆಟ್ಗಳನ್ನು ಅಳವಡಿಸಲಾಗಿದೆ.
ಕುಸುಮ್ ಸಿ
ಫೀಡರ್ ಮಟ್ಟದ ಸೋಲಾರೈಸೇಶನ್ ಯೋಜನೆಯಾದ ‘ಕುಸುಮ್-ಸಿ’ ಮೂಲಕ, ನೀರಾವರಿ ಪಂಪ್ ಸೆಟ್ಗಳಿಗೆ ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಈ ಯೋಜನೆಯಡಿ ರೆಸ್ಕೋ ಡೆವಲಪರ್ಗಳ ಮೂಲಕ 1302 ಮೆ.ವ್ಯಾ. ವಿಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರಗಳನ್ನು 248 ಉಪಕೇಂದ್ರಗಳಿಗೆ ಸಂಪರ್ಕಿಸುವ ಮೂಲಕ 806 ಕೃಷಿ ಫೀಡರ್ ಗಳನ್ನೊಳಗೊಂಡ 3,37,331 ಕೃಷಿ ಪಂಪ್ ಸೆಟ್ಗಳಿಗೆ ಹಗಲಿನಲ್ಲಿ ವಿದ್ಯುತ್ ಪೂರೈಸುತ್ತದೆ. ಎಂಎನ್ಆರ್ಇಯು ಪ್ರತಿ ಮೆ.ವ್ಯಾ.ಗೆ 1.05 ಕೋಟಿ ರೂ. ಅನುದಾನ ನೀಡುತ್ತಿದೆ.
ಬೆಸ್ಕಾಂ ಮತ್ತು ಹೆಸ್ಕಾಂ ಗಳಲ್ಲಿ 753.18 ಮೆ.ವ್ಯಾ.ಗೆ ಬಿಡ್ಗಳನ್ನು ಸ್ವೀಕರಿಸಲಾಗಿದ್ದು, 107 ಉಪಕೇಂದ್ರಗಳ 1,80,430 ಕೃಷಿ ಪಂಪ್ ಸೆಟ್ಗಳು ಮತ್ತು 463 ಕೃಷಿ ಫೀಡರ್ಗಳನ್ನು ಒಳಗೊಂಡಿವೆ. 12 ಸೋಲಾರ್ ಪವರ್ ಜನರೇಟರ್ಗಳಿಗೆ ಕಾರ್ಯಾದೇಶವನ್ನು ನೀಡಲಾಗಿದ್ದು, ಈ ಸೌರ ವಿದ್ಯುತ್ ಸ್ಥಾವರಗಳನ್ನು ಮಾರ್ಚ್-2025 ರೊಳಗೆ ಗ್ರಿಡ್ಗೆ ಸಂಪರ್ಕಿಸಲಾಗುತ್ತದೆ.
ಮಾ.11ರಂದು ‘ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ’ರಾಗಿ ‘ಡಾ.ಬಿ ಯೋಗೇಶ್ ಬಾಬು’ ಅಧಿಕಾರ ಪದಗ್ರಹಣ
ರಾಜ್ಯದಲ್ಲಿ ‘ಕಾಂಗ್ರೆಸ್ ಸರ್ಕಾರ 10 ವರ್ಷ’ ಅಧಿಕಾರದಲ್ಲಿ ಇರುತ್ತೆ: ಸಚಿವ ರಾಮಲಿಂಗಾರೆಡ್ಡಿ ಭವಿಷ್ಯ