ಕೆಎನ್ಎನ್ಡಿಜಿಟಲ್ಡೆಸ್ಕ್: ನಿಮ್ಮ ಮುದ್ದಾದ ಮಗುವಿನ ಚರ್ಮದ ಆರೈಕೆಯ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ. ಚಳಿಗಾಲದಲ್ಲಿ ಸಹಜವಾಗಿ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಚರ್ಮ ಒಡೆಯುವುದು ಬಿರುಕಾಗುವುದು. ಇಂತಹ ಋತುಮಾನದಲ್ಲಿ ಮಗುವಿನ ಆರೈಕೆಯ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಎಳೆಯ ಮೃದುವಾದ ಚರ್ಮದ ಆರೈಕೆ ತುಂಬಾ ನಾಜೂಕಾಗಿರಬೇಕು.
ಮಗುವಿನ ಸ್ನಾನ ಸೂರ್ಯ ನೆತ್ತಿಗೆ ಬಂದ ಮೇಲೆ ಆಗಲಿ. ಬೆಳಗ್ಗೆ ಮಗುವಿಗೆ ಸ್ನಾನ ಬೇಡ. ಹೆಚ್ಚು ಹೊತ್ತು ಬಚ್ಚಲು ಮನೆಯಲ್ಲಿ ಮಗುವನ್ನು ಇರಿಸಬೇಡಿ. ಚಳಿ ಇದೆ ಎಂದು ಮಗುವಿಗೆ ತೀವ್ರವಾದ ಬಿಸಿ ನೀರು ಸ್ನಾನ ಮಾಡಿಸಬೇಡಿ. ಆದರೆ ನಮ್ಮ ಹಳೆಯ ಪದ್ಧತಿ ಏನೆಂದರೆ ತುಂಬಾ ಸುಡುವ ನೀರು ಮಗುವಿಗೆ ಹಾಕಿದರೆ ಒಳ್ಳೆಯದು ಅಂತ ಹೇಳುತ್ತಾರೆ. ಆದರೆ ಈಗಿನ ಆಧುನಿಕ ವೈದ್ಯರು ಇದನ್ನು ತಳ್ಳಿ ಹಾಕುತ್ತಾರೆ. ತುಂಬಾ ಸುಡುವ ನೀರು ಚಿಕ್ಕ ಮಕ್ಕಳಿಗೆ ಚರ್ಮದ ಮೇಲೆ ಕೆಂಪು ಕಲೆಗಳು ಅಥವಾ ಅಲರ್ಜಿ ಆಗಬಹುದು ಎಂದು ಹೇಳುತ್ತಾರೆ. ಚಳಿಗಾಲದಲ್ಲಿ ನೀರಿನ ಟಬ್ನಲ್ಲಿ ಹೆಚ್ಚು ಹೊತ್ತು ಮಗುವನ್ನು ಬಿಡಬೇಡಿ. ಇದರಿಂದ ಶೀತವಾಗುವ ಸಂಭವ ಇರುತ್ತದೆ.
ಮಗುವಿಗೆ ಸ್ನಾನ ಮಾಡಿಸುವ ಮೊದಲು ಕೊಬ್ಬರಿ ಎಣ್ಣೆ ಅಥವಾ ಯಾವುದಾದರೂ ಶುದ್ಧವಾದ ಎಣ್ಣೆಯನ್ನು ತೆಗೆದುಕೊಂಡು ಮಗುವಿನ ಮೈಗೆಲ್ಲಾ ಹಚ್ಚಿ. ಮೃದುವಾಗಿ ಮಸಾಜ್ ಮಾಡಿ ಇದರಿಂದ ನಿಮ್ಮ ಕಂದನ ಚರ್ಮಕ್ಕೆ ಎಣ್ಣೆ ಅಂಶ ಸೇರಿಕೊಳ್ಳುತ್ತದೆ. ಚಳಿಗಾಲದಲ್ಲಿ ಚರ್ಮದಲ್ಲಿ ಎಣ್ಣೆ ಅಥವಾ ಜಿಡ್ಡಿನ ಅಂಶ ಇರುವುದು ತುಂಬಾ ಮುಖ್ಯವಾಗಿರುತ್ತದೆ.
ಹೆಚ್ಚು ರಾಸಾಯನಿಕ ಯುಕ್ತ ಸಾಬೂನಿನ ಬಳಕೆ ಬೇಡವೇ ಬೇಡ. ಸ್ನಾನಕ್ಕೆ ಶುದ್ಧವಾದ ಕಡಲೆ ಬೇಳೆ ಹಿಟ್ಟು ಬೆಸ್ಟ್. ಇದು ನಮ್ಮ ಹಳೆಯ ಸಾಂಪ್ರದಾಯಕವಾದ ಸ್ನಾನದ ಪದ್ಧತಿ. ಕಡಲೆ ಬೇಳೆ ಹಿಟ್ಟು ಹಾಕಿ ಮಗುವಿಗೆ ಸ್ನಾನ ಮಾಡಿಸಿದರೆ ಚರ್ಮದ ತೇವಾಂಶ ಹಾಗೆಯೇ ಉಳಿಯುತ್ತದೆ. ಚರ್ಮವನ್ನು ಇದು ಹೈಡ್ರೇಟ್ ಮಾಡುತ್ತದೆ. ಕೆಮಿಕಲ್ಯುಕ್ತ ಸಾಬೂನು ಬಳೆಯ ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. ಸ್ನಾನವಾದ ನಂತರ ನಿಮ್ಮ ಕಂದನನ್ನು ಶುಭ್ರವಾದ ತೆಳುವಾದ ಬಟ್ಟೆಯಿಂದ ನಿಧಾನವಾಗಿ ಸೂಕ್ಷ್ಮವಾಗಿ ಒರೆಸಿ.
ಹಸುಗೂಸುಗಳ ಚರ್ಮ ತುಂಬಾ ಸೂಕ್ಷ್ಮ ಹಾಗಾಗಿ ಮಗುವಿನ ಚರ್ಮ ಹೊಂದಿಕೊಳ್ಳುವಂತಹ ಪಿಎಚ್ ಲೆವಲ್ ಅನ್ನು ನೋಡಿಕೊಂಡು ಲೋಷನ್ ಕ್ರೀಮ್ಗಳನ್ನು ಆಯ್ಕೆ ಮಾಡಿಕೊಳ್ಳಿ. ಆಮ್ಲೀಯ ಪಿಎಚ್ ಮಟ್ಟವು ಚರ್ಮದ ಸೋಂಕಿನಿಂದ ರಕ್ಷಣೆ ನೀಡುತ್ತದೆ. ಹಾಗಾಗಿ ನೀವು ಕೊಳ್ಳುವ ಲೋಷನ್ನಲ್ಲಿ ಪಿಎಚ್ ಮಟ್ಟ ಎಷ್ಟಿದೆ ಎಂಬುದನ್ನು ಖಾತ್ರಿಪಡಿಸಿಕೊಂಡು ಲೋಷನ್ ಖರೀದಿಸಿ.
ಮಗುವಿನ ಸ್ನಾನಕ್ಕೆ ಕಡಲೆ ಹಿಟ್ಟಿನ ಜೊತೆ ಒಂದು ವೇಳೆ ಸಾಬೂನನ್ನು ಆಗಾಗ ಬಳಸಲು ಇಚ್ಛಿಸಿದರೆ ಸಾಬೂನಿನ ಆಯ್ಕೆಯಲ್ಲಿ ತುಂಬಾ ಜಾಗರೂಕರಾಗಿರಬೇಕು. ನಿಮ್ಮ ಮುದ್ದು ಕಂದಮ್ಮನಿಗೆಂದು ಕೊಳ್ಳುವ ಸಾಬೂನು ರಾಸಾಯನಿಕ, ಸುಗಂಧ ಧ್ರವ್ಯ, ಆಲ್ಕೋಹಾಲ್, ಪ್ಯಾರಬನ್ಗಳಿಂದ ಸಂಪೂರ್ಣವಾಗ ಮುಕ್ತವಾಗಿರಬೇಕು.