ಬೆಂಗಳೂರು: ರಾಜ್ಯದಲ್ಲಿ ಯಾವುದೇ ಸಚಿವರಾಗಲಿ, ಮಾಜಿ ಸಚಿವರಾಗಲಿ ಪ್ರಕರಣ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ವಿಧಾನಸಭಾ ಚುನಾವಣೆ ವೇಳೆಯಲ್ಲಿ ದಾಖಲಾಗಿದ್ದಂತ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದುಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಪೀಠವು ಪ್ರಕರಣ ದಾಖಲಾದ ನಂತ್ರ ಎಷ್ಟು ಬಾರಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾಗಿದ್ದಾರೆ ಎಂಬುದಾಗಿ ಪ್ರಶ್ನಿಸಿತು.
ಇದಕ್ಕೆ ನ್ಯಾಯಪೀಠಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದಂತ ವಕೀಲರು ಈವರೆಗೆ ನಾಲ್ಕು ಬಾರಿ ಸಮನ್ಸ್ ಜಾರಿಗೊಳಿಸಲಾಗಿದೆ. ಆದರೇ ಈವರೆಗೆ ಒಮ್ಮೆಯೂ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಿಲ್ಲ ಎಂಬುದಾಗಿ ಗಮನಕ್ಕೆ ತಂದರು.
ಇದರಿಂದ ಸಿಟ್ಟಾದಂತ ಹೈಕೋರ್ಟ್ ನ್ಯಾಯಪೀಠವು, ರಾಜ್ಯದಲ್ಲಿ ಯಾವುದೇ ಸಚಿವರಾಗಲಿ, ಮಾಜಿ ಸಚಿವರಾಗಲಿ ಪ್ರಕರಣ ದಾಖಲಾದ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು. ಮುಂದಿನ ವಿಚಾರಣೆ ವೇಳೆ ಮ್ಯಾಜಿಸ್ಟ್ರೇಟ್ ಮುಂದೆ ಶ್ರೀರಾಮುಲು ಹಾಜರಾಗಬೇಕು. ಒಂದು ವೇಳೆ ಹಾಜರಾಗಲಿದ್ದಲ್ಲಿ ಬಂಧನ ವಾರಂಟ್ ಹೊರಡಿಸಬೇಕಾಗುತ್ತದೆ ಎಂದು ಶ್ರೀರಾಮುಲುಗೆ ಎಚ್ಚರಿಕೆ ನೀಡಿದರು.