ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಅಲ್ಪಸಂಖ್ಯಾತ ಜನಾಂಗದವರ ಏಳಿಗೆಗಾಗಿ ಸ್ವಯಂ ಉದ್ಯೋಗ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಫೆ.29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿಯನ್ನು https://kmdconline.karnataka.gov.in ಜಾಲತಾಣದ ಮೂಲಕ ಸಲ್ಲಿಸಬಹುದಾಗಿದೆ.
ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಜನಾಂಗದ ಏಳಿಗೆಗಾಗಿ ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯ ಜನರಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಕೃಷಿ ಆಧಾರಿತ ಚಟುವಟಿಕೆ ಮುಂತಾದವುಗಳನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನವಾಗಿ ಘಟಕದ ವೆಚ್ಚ ಶೇ.33% ಅಥವಾ ಗರಿಷ್ಠ ರೂ.1ಲಕ್ಷದವರೆಗೆ ಸಹಾಯಧನ ನೀಡಲಾಗುವುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು. ಕರ್ನಾಟಕದ ನಿವಾಸಿಯಾಗಿರಬೇಕು. ಕನಿಷ್ಟ 18 ವರ್ಷ ಮೇಲ್ಪಟ್ಟು 55 ವರ್ಷದೊಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ ರೂ.81,000/- ಹಾಗೂ ನಗರ ಪ್ರದೇಶದಲ್ಲಿ ರೂ.1,03,000 ಮೀರಿರಬಾರದು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೆಂದ್ರ, ರಾಜ್ಯ ಸರ್ಕಾರಿ, ಪಿಎಸ್‍ಯು ಉದ್ಯೋಗಿಯಾಗಿರಬಾರದು. ಕೆ.ಎಂ.ಡಿ.ಸಿಯಲ್ಲಿ ಸುಸ್ಥಿರರಾಗಿರಬಾರದು.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಅಥವಾ ದೂರವಾಣಿ ಸಂಖ್ಯೆ 08194-226412, 8277944213 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.