ಬೆಂಗಳೂರು :ರಾಜ್ಯದ ಜನತೆಗೆ ಆಹಾರ ಇಲಾಖೆ ಸಿಹಿ ಸುದ್ದಿ ಒಂದನ್ನು ನೀಡಿದ್ದು ಹೊಸದಾಗಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಮಾರ್ಚ್ 31 ರೊಳಗೆ ಪರಿಶೀಲನೆ ನಡೆಸಿ ಏಪ್ರಿಲ್ 1 ರಿಂದ ವಿತರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು. ವಿಧಾನಸಭೆಯ ಪ್ರಶ್ನೋತ್ತರ ವೇಳೆ ಶಾಸಕಿ ನಯನಾ ಮೋಟಮ್ಮ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಹಿಂದಿನ ಸರ್ಕಾರ 2.95 ಲಕ್ಷ ಕಾರ್ಡ್ಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿತ್ತು. ಆದರೆ ನಾವು ಇಲ್ಲಿಯವರೆಗೆ 57 ಸಾವಿರ ಹೊಸ ಕಾರ್ಡ್ ವಿತರಿಸಿದ್ದೇವೆ. ಆರೋಗ್ಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದ್ದೇವೆ.
ಇನ್ನು 5 ಕೆಜಿ ಅಕ್ಕಿಯ ಹಣ ಬರದವರಿಗೆ ಅರಿಯರ್ಸ್ ಕೊಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದರೆ 100ಕ್ಕೆ 90ರಷ್ಟು ಪಡಿತರ ಕಾರ್ಡ್ದಾರರಿಗೆ ಐದು ಕೆಜಿ ಅಕ್ಕಿಯ ಹಣ ಕೊಟ್ಟಿದ್ದೇವೆ. ಶೇ 5 ರಷ್ಟು ಏರುಪೇರು ಇದರಲ್ಲಿ ಇದೆ, ಅದನ್ನೂ ಸರಿಪಡಿಸುತ್ತೇವೆ. ಹೊಸ ಕಾರ್ಡ್ಗಳಿಗೆ ಅರ್ಜಿ ಬಂದರೆ ತಡ ಮಾಡದೆ ಒಂದು ವಾರದೊಳಗೆ ಕಾರ್ಡ್ ವಿತರಣೆ ಮಾಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.