ಬೆಂಗಳೂರು : ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಸಂಜೆ 5 ರಿಂದ ಮತದಾನ ನಡೆಯುವ 16ರ ಮಧ್ಯರಾತ್ರಿ 12ರ ವರೆಗೆ ಮತ್ತು ಮತ ಎಣಿಕೆ ದಿನವಾದ ಫೆಬ್ರವರಿ 20ರಂದು ಬೆಳಿಗ್ಗೆ ಆರರಿಂದ ಮಧ್ಯರಾತ್ರಿ 12 ಗಂಟೆವರೆಗೆ ನಗರದ ಪೊಲೀಸ್ ಕಮಿಷನರಿ ವ್ಯಾಪ್ತಿಯಲ್ಲಿ ಮಧ್ಯ ಮಾರಾಟ ಮಳಿಗೆಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಆದರೆ ಈ ಕ್ರಮ ಮೇಲ್ನೋಟಕ್ಕೆ ಸಮರ್ಪಕವಾಗಿಲ್ಲ ಎಂದು ನಿನ್ನೆ ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿತ್ತು. ಸದ್ಯ ಇದೇ ವಿಚಾರ ಸಂಬಂಧ ಪರಿಷತ್ ಚುನಾವಣೆಗೆ ಮದ್ಯ ಮಾರಾಟ ನಿರ್ಬಂಧದಲ್ಲಿ ಮಾರ್ಪಾಡು ಮಾಡಲಾಗಿದೆ. ಫೆ.16ರ ಬೆಳಗ್ಗೆ 6ರಿಂದ ಮಧ್ಯರಾತ್ರಿವರೆಗೆ ಹಾಗೂ ಫೆ.20ರ ಬೆಳಗ್ಗೆ 6ರಿಂದ ಮಧ್ಯರಾತ್ರಿವರೆಗೆ ಮಾತ್ರ ಮದ್ಯ ಮಾರಾಟ ನಿರ್ಬಂಧ ಹೇರಿ ನ್ಯಾ.ಎಸ್.ಆರ್.ಕೃಷ್ಣ ಕುಮಾರ್ರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಇದೇ 1ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘಟನೆಯ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್ ಸೇರಿದಂತೆ ಒಟ್ಟು ನಾಲ್ವರು ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಪೀಠ ಈ ಅಭಿಪ್ರಾಯ ತಿಳಿಸಿದೆ.
ಮತದಾನ, ಎಣಿಕೆ ದಿನದಂದು ಮಾತ್ರ ಮದ್ಯ ಮಾರಾಟ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ. ಮತದಾನ ಹಿನ್ನೆಲೆ ಫೆ.16ರ ಬೆಳಗ್ಗೆ 6ರಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿರ್ಬಂಧ ಹೇರಲಾಗಿದೆ. ಹಾಗೂ ಎಣಿಕೆ ದಿನವಾದ ಫೆ.20ರ ಬೆಳಗ್ಗೆ 6ರಿಂದ ಮಧ್ಯರಾತ್ರಿವರೆಗೆ ಮಾತ್ರ ಮದ್ಯ ಮಾರಾಟ ನಿರ್ಬಂಧ ಹೇರಲಾಗಿದೆ. ಆಹಾರ ಪೂರೈಸಲು ರೆಸ್ಟೋರೆಂಟ್ಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದೆ.
ಮತದಾರರು ಶಿಕ್ಷಕರಾಗಿರುವುದರಿಂದ ಮದ್ಯಪಾನದ ನಿರ್ಬಂಧ ಪರಿಶೀಲನೆ ಮಾಡಲಾಗಿದೆ. ಮದ್ಯಪಾನ ನಿರ್ಬಂಧಿಸದಿದ್ದರೆ ಶಿಕ್ಷಕರು ಮದ್ಯ ಸೇವಿಸುತ್ತಾರೆಂದು ಭಾವಿಸಬೇಕಿಲ್ಲ. ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಇಷ್ಟು ದಿನದ ನಿರ್ಬಂಧ ಅಗತ್ಯವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.